ಪಶ್ಚಿಮ ಬಂಗಾಳ: ಸಂದೇಶ್ಖಾಲಿ ಗೆ ತೆರಳುತ್ತಿದ್ದ ಐಎಸ್ಎಫ್ ಶಾಸಕನ ಬಂಧನ
ನೌಶದ್ ಸಿದ್ದೀಕ್ | Photo: PTI
ಕೋಲ್ಕತ್ತಾ: ಪಶ್ಚಿಮಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಹಿಂಸಾಚಾರ ಪೀಡಿತ ಸಂದೇಶ್ಖಾಲಿಗೆ ತೆರಳುತ್ತಿದ್ದ ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್ಎಫ್)ನ ಶಾಸಕ ನೌಶದ್ ಸಿದ್ದೀಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಕಾಂಗ್ರೆಸ್ ನಿಯೋಗವನ್ನು ತಡೆ ಹಿಡಿದಿದ್ದಾರೆ.
ಬಿಗಿ ಭದ್ರತೆಯ ಹೊರತಾಗಿಯೂ ಕಾಂಗ್ರೆಸ್ ನಿಯೋಗ ಸ್ಥಳೀಯ ನಿವಾಸಿಗಳಿಂದ ಮಾಹಿತಿ ಪಡೆಯಲು ಹಾಗೂ ಅಲ್ಲಿನ ಪರಿಸ್ಥಿತಿಯನ್ನು ತಿಳಿದುಕೊಳ್ಳಲು ಸಂದೇಶ್ಖಾಲಿ ಪ್ರವೇಶಿಸಲು ಸಫಲವಾಯಿತು.
ದಕ್ಷಿಣ 24 ಪರಗಣ ಜಿಲ್ಲೆಯ ಭಂಗಾರ್ ಕ್ಷೇತ್ರದ ಪ್ರತಿನಿಧಿ ಸಿದ್ದೀಕ್ ಅವರನ್ನು ಇಲ್ಲಿನ ಸಯನ್ಸ್ ಸಿಟಿ ಸಮೀಪ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದೀಕ್, ‘‘ಅವರು ನನ್ನನ್ನು ಯಾಕೆ ಬಂಧಿಸಿದ್ದಾರೆ ಎಂದು ತಿಳಿದಿಲ್ಲ. ಈ ಸ್ಥಳ ಸಂದೇಶ್ಖಾಲಿಯಿಂದ ತುಂಬಾ ದೂರದಲ್ಲಿದೆ. ಗ್ರಾಮಸ್ಥರನ್ನು ಭೇಟಿಯಾಗಲು ನಾನು ಅಲ್ಲಿಗೆ ಹೋಗಬೇಕು. ನಾನು ಯಾವುದೇ ನಿಯಮ ಉಲ್ಲಂಘಿಸಿಲ್ಲ. ಸಂದೇಶ್ಖಾಲಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವಾಗ ನನ್ನನ್ನು ಇಲ್ಲಿ ಯಾಕೆ ತಡೆಯಲಾಯಿತು’’ ಎಂದು ಅವರು ಸುದ್ದಿಗಾರರರಲ್ಲಿ ಪ್ರಶ್ನಿಸಿದ್ದಾರೆ.