ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಕುನಾರ್ ಹೆಂಬ್ರಮ್ ರಾಜೀನಾಮೆ
ಕುನಾರ್ ಹೆಂಬ್ರಮ್ | Photo; indiatoday.in
ಕೊಲ್ಕತ್ತಾ: ಪಶ್ಚಿಮ ಬಂಗಾಳದ ಝರ್ಗಮ್ ಕ್ಷೇತ್ರದ ಬಿಜೆಪಿ ಸಂಸದ ಕುನಾರ್ ಹೆಂಬ್ರಮ್ ಅವರು ಇಂದು ಪಕ್ಷಕ್ಕೆ “ವೈಯಕ್ತಿಕ ಕಾರಣಗಳನ್ನು” ನೀಡಿ ರಾಜೀನಾಮೆ ನೀಡಿದ್ದಾರೆ.
ತಾನು ಸಂಸದ ಸ್ಥಾನವನ್ನೂ ತೊರೆಯುವುದಾಗಿ ಆರಂಭದಲ್ಲಿ ಹೇಳಿದ್ದ ಹೆಂಬ್ರಮ್ ನಂತರ ತನ್ನ ನಿರ್ಧಾರ ಬದಲಾಯಿಸಿ ಸಂಸದರಾಗಿ ಮುಂದುವರಿಯುವುದಾಗಿ ತಿಳಿಸಿದ್ದಾರೆ.
“ಇನ್ನೆರಡು ತಿಂಗಳಲ್ಲಿ ಕೊನೆಗೊಳ್ಳಲಿರುವ ನನ್ನ ಅವಧಿ ಮುಗಿಯುವ ತನಕ ಸಂಸದನಾಗಿ ಮುಂದುವರಿಯುತ್ತೇನೆ. ಸಂಸದ ದಿಢೀರ್ ಎಂದು ಹುದ್ದೆ ತೊರೆದರೆ ಜನರಿಗೆ ಕಷ್ಟವಾಗುತ್ತದೆ,” ಎಂದು ಅವರು ಹೇಳಿದ್ದಾರೆ.
ಮೊದಲ ಬಾರಿ ಸಂಸದರಾಗಿ ಆಯ್ಕೆಯಾಗಿರುವ ಹೆಂಬ್ರಮ್ ತಾವು ಬೇರೆ ಯಾವುದೇ ಪಕ್ಷ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ನಾನು ಪುಸ್ತಕ ಬರೆಯುತ್ತಾ ಹಾಗೂ ಸಮಾಜ ಸೇವೆ ಮಾಡುತ್ತಾ ಸಮಯ ಕಳೆಯುತ್ತೇನೆ,” ಎಂದು ಅವರು ತಿಳಿಸಿದ್ದಾರೆ.
ಹೆಂಬ್ರಮ್ ತಮ್ಮ ನಿರ್ಧಾರದ ಬಗ್ಗೆ ಕೆಲ ದಿನಗಳ ಹಿಂದೆಯೇ ಪಕ್ಷಕ್ಕೆ ತಿಳಿಸಿದ್ದಾರೆ ಎಂದು ರಾಜ್ಯ ಬಿಜೆಪಿ ವಕ್ತಾರ ಸಮಿಕ್ ಭಟ್ಟಾಚಾರ್ಯ ಹೇಳಿದ್ದಾರೆ.
ಬಿಜೆಪಿ ಈ ಕ್ಷೇತ್ರದಲ್ಲಿ ಸೋಲಲಿದೆ ಎಂದು ಅರಿತು ಹೆಂಬ್ರಮ್ ರಾಜೀನಾಮೆ ನೀಡಿದ್ದಾರೆಂದು ಟಿಎಂಸಿ ಸಂಸದ ಶಂತನು ಸೇನೆ ಹೇಳಿದ್ದಾರೆ.