ಶೇಖ್ ಶಹಾಜಹಾನ್ ನನ್ನು ಸಿಬಿಐಗೆ ಒಪ್ಪಿಸಲು ಪಶ್ಚಿಮ ಬಂಗಾಳ ಸರಕಾರದ ನಕಾರ
ಶೇಖ್ ಶಹಾಜಹಾನ್
ಕೋಲ್ಕತಾ : ಕಲ್ಕತ್ತಾ ಹೈಕೋರ್ಟ್ ಆದೇಶಕ್ಕೆ ಸೊಪ್ಪು ಹಾಕದ ಪಶ್ಚಿಮ ಬಂಗಾಳ ಸರಕಾರವು ಸಂದೇಶಖಾಲಿಯಲ್ಲಿ ಹಫ್ತಾ ವಸೂಲಿ,ಭೂ ಕಬಳಿಕೆ ಮತ್ತು ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಎದುರಿಸುತ್ತಿರುವ ಟಿಎಂಸಿಯ ಮಾಜಿ ನಾಯಕ ಶೇಖ್ ಶಹಾಜಹಾನ್ ನನ್ನು ಸಿಬಿಐ ವಶಕ್ಕೆ ಒಪ್ಪಿಸಲು ನಿರಾಕರಿಸಿದೆ.
ಶಹಾಜಹಾನ್ನನ್ನು ಮತ್ತು ಪ್ರಕರಣದ ದಾಖಲೆಗಳನ್ನು ಮಂಗಳವಾರ ಅಪರಾಹ್ನ 4:30ರೊಳಗೆ ಸಿಬಿಐಗೆ ಹಸ್ತಾಂತರಿಸುವಂತೆ ಕಲ್ಕತ್ತಾ ಉಚ್ಛ ನ್ಯಾಯಾಲಯವು ಸಿಐಡಿ ಪೋಲಿಸರಿಗೆ ಆದೇಶಿಸಿತ್ತು. ಆದರೆ ಶಹಾಜಹಾನ್ನನ್ನು ಕಸ್ಟಡಿಗೆ ಪಡೆದುಕೊಳ್ಳಲು ಕೋಲ್ಕತಾದ ಪೋಲಿಸ್ ಕೇಂದ್ರ ಕಚೇರಿಗೆ ತೆರಳಿದ್ದ ಸಿಬಿಐ ತಂಡ ಸಂಜೆ 7:30ರ ವೇಳೆಗೆ ಬರಿಗೈಯಲ್ಲಿ ಮರಳಿದೆ. ರಾಜ್ಯ ಸರಕಾರವು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ ಮತ್ತು ಅದರ ತೀರ್ಪು ಹೊರಬೀಳುವವರೆಗೆ ಶಹಾಜಹಾನ್ನನ್ನು ಒಪ್ಪಿಸಲು ನಿರಾಕರಿಸಿದೆ.
ಸಂಪೂರ್ಣ ಪಕ್ಷಪಾತದ ಧೋರಣೆಗಾಗಿ ಮಂಗಳವಾರ ಬೆಳಿಗ್ಗೆ ರಾಜ್ಯದ ಪೋಲಿಸರನ್ನು ತರಾಟೆಗೆತ್ತಿಕೊಂಡಿದ್ದ ಉಚ್ಛ ನ್ಯಾಯಾಲಯವು, ಸಿಬಿಐ ತನಿಖೆಗೆ ಇದಕ್ಕಿಂತ ಅರ್ಹ ಪ್ರಕರಣ ಇನ್ನೊಂದಿಲ್ಲ ಎಂದು ಹೇಳಿತ್ತು.
ಸಿಬಿಐ ಮತ್ತು ರಾಜ್ಯ ಪೋಲಿಸ್ ಅಧಿಕಾರಿಗಳ ವಿಶೇಷ ತನಿಖಾ ತಂಡದ ರಚನೆಗೆ ಹಿಂದಿನ ಆದೇಶವನ್ನು ರದ್ದುಗೊಳಿಸಿರುವ ಉಚ್ಛ ನ್ಯಾಯಾಲಯವು ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿದೆ.
ಅತ್ತ ತನ್ನ ಅರ್ಜಿಯ ತುರ್ತು ವಿಚಾರಣೆ ಕೋರಿ ರಾಜ್ಯ ಸರಕಾರವು ಸಲ್ಲಿಸಿದ್ದ ಮನವಿಯನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ. ರಿಜಿಸ್ಟ್ರಾರ್-ಜನರಲ್ ಮುಂದೆ ತನ್ನ ಮನವಿಯನ್ನು ಉಲ್ಲೇಖಿಸುವಂತೆ ಅದು ಸರಕಾರಕ್ಕೆ ಸೂಚಿಸಿದೆ.
ಜ.5ರಂದು ಶೇಖ್ ಶಹಾಜಹಾನ್ ನಿವಾಸದ ಮೇಲೆ ದಾಳಿ ನಡೆಸಲು ಜಾರಿ ನಿರ್ದೇಶನಾಲಯ (ಈಡಿ)ಅಧಿಕಾರಿಗಳು ತೆರಳಿದ್ದಾಗ ಆತನ ಬೆಂಬಲಿಗರು ಅವರ ಮೇಲೆ ಹಲ್ಲೆ ನಡೆಸಿದ್ದರು. ಆಗಿನಿಂದ ತಲೆಮರೆಸಿಕೊಂಡಿದ್ದ ಆತನನ್ನು ಕೊನೆಗೂ ಉಚ್ಛ ನ್ಯಾಯಾಲಯದ ಆದೇಶದ ಬಳಿಕ ವಿಶೇಷ ಪೋಲಿಸ್ ತಂಡವು ಬಂಧಿಸಿದೆ. ಟಿಎಂಸಿ ಆತನನ್ನು ಆರು ವರ್ಷಗಳ ಅವಧಿಗೆ ಪಕ್ಷದಿಂದ ಉಚ್ಚಾಟಿಸಿದೆ.
ಶೇಖ್ ಶಹಾಜಹಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ 12.78 ಕೋಟಿ ರೂ.ಮೌಲ್ಯದ ಚರಾಸ್ತಿ ಮತ್ತು ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಲಾಗಿದೆ ಎಂದು ಈಡಿ ಮಂಗಳವಾರ ತಿಳಿಸಿದೆ.