ತನ್ನ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ನಿರಾಕರಿಸಿದ ಪಶ್ಚಿಮ ಬಂಗಾಳ ರಾಜ್ಯಪಾಲ
ಸಿ.ವಿ.ಆನಂದ್ ಬೋಸ್ | PC: PTI
ಕೋಲ್ಕತಾ : ತನ್ನ ವಿರುದ್ಧದ ಲೈಂಗಿಕ ಕಿರುಕುಳ ಆರೋಪವನ್ನು ನಿರಾಕರಿಸಿರುವ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ್ ಬೋಸ್ ಅವರು, ಅದು ಲೋಕಸಭಾ ಚುನಾವಣೆಗಳ ನಡುವೆ ಚುನಾವಣಾ ಲಾಭಕ್ಕಾಗಿ ಸೃಷ್ಟಿಸಲಾಗಿರುವ ಕಟ್ಟುಕತೆ ಎಂದು ಬಣ್ಣಿಸಿದ್ದಾರೆ.
ಗುರುವಾರ ಕೋಲ್ಕತಾದ ರಾಜಭವನದ ಮಹಿಳಾ ಗುತ್ತಿಗೆ ಉದ್ಯೋಗಿಯೋರ್ವರು ಬೋಸ್ ಎ.24ರಂದು ಮತ್ತು ಇಂದೂ ಸಹ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಪೋಲಿಸ್ ದೂರನ್ನು ಸಲ್ಲಿಸಿದ್ದರು.
ದೂರಿನ ಬಳಿಕ ರಾಜಭವನವು ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ, ರಾಜಕೀಯ ಪಕ್ಷಗಳ ಏಜೆಂಟ್ಗಳಾಗಿರುವ ಅತೃಪ್ತ ಉದ್ಯೋಗಿಗಳು ಬೋಸ್ ವಿರುದ್ಧ ಅವಮಾನಕಾರಿ ನಿರೂಪಣೆಗಳನ್ನು ಹರಡುತ್ತಿದ್ದಾರೆ ಎಂದು ಹೇಳಿತ್ತು.
ಸತ್ಯವು ಗೆಲ್ಲುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಬೋಸ್,‘ಇಂತಹ ಕಪೋಲಕಲ್ಪಿತ ನಿರೂಪಣೆಗಳಿಗೆ ನಾನು ಮಣಿಯುವುದಿಲ್ಲ. ನನ್ನ ಹೆಸರನ್ನು ಕೆಡಿಸಿ ಚುನಾವಣಾ ಲಾಭವನ್ನು ಮಾಡಿಕೊಳ್ಳಲು ಯಾರಾದರೂ ಬಯಸಿದ್ದರೆ ದೇವರು ಅವರಿಗೆ ಹರಸಲಿ. ಆದರೆ ಬಂಗಾಳದಲ್ಲಿ ಭ್ರಷ್ಟಾಚಾರ ಮತ್ತು ಹಿಂಸೆಯ ವಿರುದ್ಧ ನನ್ನ ಹೋರಾಟವನ್ನು ನಿಲ್ಲಿಸಲು ಅವರಿಗೆ ಸಾಧ್ಯವಿಲ್ಲ ’ಎಂದು ತಿಳಿಸಿದ್ದಾರೆ.
ಈ ನಡುವೆ ಆಡಳಿತಾರೂಢ ಟಿಎಂಸಿ,‘ರಾಜಭವನದ ಪಾವಿತ್ರ್ಯಕ್ಕೆ ಕಳಂಕವುಂಟಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ರಾತ್ರಿಯನ್ನು ಕಳೆಯಲು ರಾಜಭವನಕ್ಕೆ ಆಗಮಿಸಬೇಕಿದ್ದ ಕೆಲವೇ ಗಂಟೆಗಳ ಮುನ್ನ ರಾಜ್ಯಪಾಲರು ಕೆಲಸದ ಸುಳ್ಳು ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಇಂತಹ ಹೇಯ ವರ್ತನೆಯನ್ನು ಕಟುವಾದ ಶಬ್ದಗಳಲ್ಲಿ ಖಂಡಿಸಬೇಕು. ಯಾವುದೇ ನೆಪ ಹೇಳದೆ,ವಿಳಂಬವಿಲ್ಲದೆ ಸಂತ್ರಸ್ತೆಗೆ ನ್ಯಾಯವೊದಗಿಸಬೇಕು ’ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಹೇಳಿದೆ.