ಪಶ್ಚಿಮಬಂಗಾಳ ರಾಜ್ಯಪಾಲರಿಂದ ತನ್ನದೇ ಪ್ರತಿಮೆ ಅನಾವರಣ
ಸಿವಿ ಆನಂದ ಬೋಸ್ | PTI
ಲಕ್ನೋ: ಪಶ್ಚಿಮಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ಅಧಿಕಾರ ಸ್ವೀಕರಿಸಿ ಎರಡು ವರ್ಷವಾದ ಹಿನ್ನೆಲೆಯಲ್ಲಿ ರಾಜಭವನದಲ್ಲಿ ಶನಿವಾರ ತನ್ನದೇ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ.
ಇದು ಅತಿ ದೊಡ್ಡ ರಾಜಕೀಯ ವಿವಾದ ಹುಟ್ಟು ಹಾಕಿದೆ. ಇದನ್ನು ಪ್ರತಿಪಕ್ಷಗಳು ನಾಚಿಕೆಗೇಡಿನ ವಿಷಯ ಎಂದು ಟೀಕಿಸಿವೆ.
ರಾಜಭವದ ಒಳಗೆ ಆಯೋಜಿಸಲಾಗಿದ್ದ ಚಿತ್ರಕಲಾ ಪ್ರದರ್ಶನ ಹಾಗೂ ಶಾಲಾ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಉದ್ಘಾಟಿಸುವ ಮುನ್ನ ಈ ಪ್ರತಿಮೆಯನ್ನು ವಿಧ್ಯುಕ್ತವಾಗಿ ಅನಾವರಣಗೊಳಿಸಲಾಗಿದೆ.
ಈ ಪ್ರತಿಮೆ ಅನಾವರಣದ ವೀಡಿಯೊ ಹಾಗೂ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ, ರಾಜ್ಯಪಾಲರು ಅಧಿಕಾರದಲ್ಲಿ ಇರುವಾಗಲೇ ತನ್ನದೇ ಪ್ರತಿಮೆಯನ್ನು ಸ್ಥಾಪಿಸಿದ ಕುರಿತಂತೆ ತೀವ್ರ ಟೀಕೆ ವ್ಯಕ್ತವಾಗಿದೆ. ರಾಜ್ಯಪಾಲರು ತನ್ನನ್ನು ತಾನೇ ಸ್ತುತಿಸಿಕೊಳ್ಳುತ್ತಿದ್ದಾರೆ ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.
ಈ ಕುರಿತಂತೆ ಪಶ್ಚಿಮಬಂಗಾಳದ ಆಡಳಿತರೂಡ ಟಿಎಂಸಿ ರಾಜ್ಯಪಾಲರನ್ನು ತರಾಟೆಗೆ ತೆಗೆದುಕೊಂಡಿದೆ. ಇದು ಪ್ರಚಾರದ ಗೀಳು ಎಂದು ಹೇಳಿದೆ. ‘‘ನಮ್ಮ ರಾಜ್ಯಪಾಲ ಸಿವಿ ಆನಂದ್ ಬೋಸ್ ತನ್ನದೇ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಇದು ಎಲ್ಲೂ ಕೇಳಿರದ ವಿಷಯ. ಅವರಿಗೆ ಪ್ರಚಾರ ಬೇಕಾಗಿದೆ. ಅದಕ್ಕೆ ಅವರು ತನ್ನದೇ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಆದರೆ, ಮುಖ್ಯ ವಿಚಾರವೆಂದರೆ, ಮುಂದಿನ ಹೆಜ್ಜೆ ಏನು ? ಅವರು ತನ್ನ ಸ್ವಂತ ಪ್ರತಿಮೆಗೆ ಹೂಹಾರ ಹಾಕುವರೇ ?’’ ಎಂದು ಟಿಎಂಸಿಯ ವಕ್ತಾರ ಜಯಪ್ರಕಾಶ್ ಮಜುಂದಾರ್ ಪ್ರಶ್ನಿಸಿದ್ದಾರೆ.
ಇದು ನಮ್ಮ ರಾಜ್ಯದ ದೌರ್ಭಾಗ್ಯ ಎಂದು ಸಿಪಿಎಂ ಕೇಂದ್ರ ಸಮಿತಿ ಸದಸ್ಯ ಸುಜನ್ ಚಕ್ರವರ್ತಿ ಹೇಳಿದ್ದಾರೆ. ಇದು ನಾಚಿಕೆಗೇಡಿನ ವಿಷಯವಾಗಿದೆ. ಬಂಗಾಳದ ಸಂಸ್ಕೃತಿಯಲ್ಲಿ ಸಣ್ಣದೊಂದು ಆಟ ಆಡಲಾಗುತ್ತಿದೆ ಎಂದು ಕಾಂಗ್ರೆಸ್ ವಕ್ತಾರೆ ಸೌಮ್ಯಾ ಆಯಿಚ್ ರಾಯ್ ಹೇಳಿದ್ದಾರೆ.
ಈ ಪ್ರತಿಮೆಯನ್ನು ರಾಜ್ಯಪಾಲರಿಗೆ ಕೊಲ್ಕತ್ತಾದ ಇಂಡಿಯನ್ ಮ್ಯೂಸಿಯಂಗೆ ಸೇರಿದ ಕಲಾವಿದ ಪಾರ್ಥಾ ಶಾ ಕೊಡುಗೆಯಾಗಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯಪಾಲರನ್ನು ವೈಯುಕ್ತಿಕವಾಗಿ ಭೇಟಿಯಾಗದೆ, ಅವರ ಭಾವಚಿತ್ರವನ್ನು ಆಧರಿಸಿ ಪಾರ್ಥಾ ಶಾ ಈ ಫೈಬರ್ ಪ್ರತಿಮೆಯನ್ನು ರೂಪಿಸಿದ್ದಾರೆ ಎಂದು ಅದು ತಿಳಿಸಿದೆ.