ಪಶ್ಚಿಮ ಬಂಗಾಳ: ಸಂದೇಶಖಾಲಿಯಲ್ಲಿ ಮತ್ತೆ ಭುಗಿಲೆದ್ದ ಪ್ರತಿಭಟನೆ
ಸಾಂದರ್ಭಿಕ ಚಿತ್ರ | Photo: ANI
ಕೋಲ್ಕತಾ : ಉತ್ತರ 24 ಪರಗಣಗಳ ಜಿಲ್ಲೆಯ ಪ್ರಕ್ಷುಬ್ಧ ಸಂದೇಶಖಾಲಿಯ ಹಲವೆಡೆಗಳಲ್ಲಿ ಶುಕ್ರವಾರ ಬೆಳಿಗ್ಗೆ ಮತ್ತೆ ಪ್ರತಿಭಟನೆಗಳು ಭುಗಿಲೆದ್ದಿದ್ದು, ಸ್ಥಳಕ್ಕೆ ಧಾವಿಸಿದ ಡಿಜಿಪಿ ರಾಜೀವ್ ಕುಮಾರ್ ಅವರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದರು.
ಶುಕ್ರವಾರ ಬೆಳಿಗ್ಗೆ ಆಕ್ರೋಶಿತ ಸ್ಥಳೀಯರು ಪ್ರದೇಶದಲ್ಲಿಯ ಮಹಿಳೆಯರ ಲೈಂಗಿಕ ಶೋಷಣೆ ಮತ್ತು ಬಲವಂತದಿಂದ ಭೂಕಬಳಿಕೆ ಆರೋಪಗಳನ್ನು ಎದುರಿಸುತ್ತಿರುವ ಟಿಎಂಸಿ ನಾಯಕರಿಗೆ ಸೇರಿದ ಆಸ್ತಿಗಳಿಗೆ ಬೆಂಕಿ ಹಚ್ಚಿದರು. ಸ್ಥಳೀಯ ಟಿಎಂಸಿ ನಾಯಕರ ಮನೆಗಳಲ್ಲಿಯೂ ಅವರು ದಾಂಧಲೆ ನಡೆಸಿದರು.
ಬಡಿಗೆಗಳಿಂದ ಸಜ್ಜಿತರಾಗಿದ್ದ ಸ್ಥಳೀಯರು ಸಂದೇಶಖಾಲಿಯ ಬೆಲ್ಮಜೂರ್ ಪ್ರದೇಶದಲ್ಲಿಯ ಫಿಷಿಂಗ್ ಯಾರ್ಡ್ ಸಮೀಪದ ಜೋಪಡಿಗಳಿಗೆ ಬೆಂಕಿ ಹಚ್ಚಿ ತಲೆಮರೆಸಿಕೊಂಡಿರುವ ಟಿಎಂಸಿ ನಾಯಕ ಶಾಹಜಹಾನ್ ಶೇಖ್ ಮತ್ತು ಆತನ ಸೋದರ ಸಿರಾಜ್ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ಜೋಪಡಿಗಳು ಸಿರಾಜ್ ಗೆ ಸೇರಿದ್ದವು.
‘ವರ್ಷಗಳ ಕಾಲ ಪೋಲಿಸರು ಏನನ್ನೂ ಮಾಡಲಿಲ್ಲ, ಅದಕ್ಕಾಗಿಯೇ ನಾವು ನಮ್ಮ ಭೂಮಿ ಮತ್ತು ಗೌರವವನ್ನು ಮರಳಿ ಪಡೆಯಲು ಅಗತ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇವೆ’ ಎಂದು ಪ್ರತಿಭಟನಾಕಾರನೋರ್ವ ತಿಳಿಸಿದ.
ಸ್ಥಳಕ್ಕೆ ಧಾವಿಸಿದ ಡಿಜಿಪಿ ಸ್ಥಳೀಯರನ್ನು ಸಮಾಧಾನಿಸಿ, ‘ನಿಮ್ಮ ದೂರನ್ನು ದಾಖಲಿಸಿ,ನಾವು ಕ್ರಮವನ್ನು ತೆಗೆದುಕೊಳ್ಳುತ್ತೇವೆ. ಇಲ್ಲಿ ಪೋಲಿಸ್ ಶಿಬಿರವನ್ನೂ ಸ್ಥಾಪಿಸುತ್ತೇವೆ. ಆದರೆ ದಯವಿಟ್ಟು ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ ’ಎಂದು ಕೋರಿಕೊಂಡರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಪೋಲಿಸರು ಕಠಿಣ ಕ್ರಮವನ್ನು ತೆಗೆದುಕೊಳ್ಳಲಿದ್ದಾರೆ. ನಾವು ಪ್ರದೇಶದಲ್ಲಿ ಕಾನೂನಿನ ಆಡಳಿತವನ್ನು ಸ್ಥಾಪಿಸುತ್ತೇವೆ. ಕಾನೂನನ್ನು ಕೈಗೆ ತೆಗೆದುಕೊಳ್ಳುವವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು. ಪೋಲಿಸ್ ಇಲಾಖೆ ಮತ್ತು ಆಡಳಿತವು ಗ್ರಾಮಸ್ಥರಿಂದ ಕಿತ್ತುಕೊಳ್ಳಲಾಗಿದ್ದ ಭೂಮಿಯನ್ನು ಅವರಿಗೆ ಮರಳಿಸುವ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿವೆ ಎಂದು ತಿಳಿಸಿದರು.
ಗುರುವಾರವೂ ಸಂದೇಶಖಾಲಿಯಲ್ಲಿ ಪ್ರತಿಭಟನೆಗಳು ನಡೆದಿದ್ದು, ಹಲವೆಡೆಗಳಲ್ಲಿ ಬೆಂಕಿ ಹಚ್ಚಿದ ಘಟನೆಗಳು ನಡೆದಿದ್ದವು.
ಟಿಎಂಸಿ ನಾಯಕ ಅಜಿತ್ ಮೈತಿಗೆ ಚಪ್ಪಲಿಯೇಟು
ಶುಕ್ರವಾರ ಅಪರಾಹ್ನ ಸ್ಥಳೀಯ ಟಿಎಂಸಿ ನಾಯಕ ಅಜಿತ್ ಮೈತಿ ನಿವಾಸದಲ್ಲಿ ಧಾಂದಲೆ ನಡೆಸಿದ ಪ್ರತಿಭಟನಾಕಾರರು ಅವರನ್ನು ಚಪ್ಪಲಿಗಳಿಂದ ಥಳಿಸಿದರು. ಮೈತಿ ಭೂಕಬಳಿಕೆ ಮತ್ತು ಹಫ್ತಾ ವಸೂಲಿಯಲ್ಲಿ ಭಾಗಿಯಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.