ಬಂಗಾಳದಲ್ಲಿ ಸಿಬಿಐ ತನಿಖೆ: ಕೇಂದ್ರದ ವಿರುದ್ಧ ಗೆದ್ದ ದೀದಿ
ಮಮತಾ ಬ್ಯಾನರ್ಜಿ (PTI)
ಹೊಸದಿಲ್ಲಿ: ಪಶ್ಚಿಮಬಂಗಾಳದಲ್ಲಿ ಕೇಂದ್ರೀಯ ಏಜೆನ್ಸಿಗಳು ತನಿಖೆ ಆರಂಭಿಸಲು ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ತೃಣಮೂಲ ಕಾಂಗ್ರೆಸ್ ಸರ್ಕಾರ ರದ್ದುಪಡಿಸಿದ ಬಳಿಕವೂ, ರಾಜ್ಯದಲ್ಲಿ ಸಿಬಿಐ ಅಕ್ರಮವಾಗಿ ತನಿಖೆ ನಡೆಸುತ್ತಿದೆ ಎಂದು ಆಪಾದಿಸಿ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿರುವ ಸಂವಿಧಾನ ದಾವೆಯನ್ನು ತಿರಸ್ಕರಿಸುವಂತೆ ಕೋರಿ ಕೇಂದ್ರ ಸರ್ಕಾರ ಮಂಡಿಸಿದ ಹಲವು ಆಧಾರಗಳನ್ನು ಸುಪ್ರೀಂಕೋರ್ಟ್ ಬುಧವಾರ ತಳ್ಳಿಹಾಕಿದೆ. ಈ ಮೂಲಕ ಕೇಂದ್ರ- ರಾಜ್ಯ ನಡುವಿನ ಸಂಘರ್ಷದ ಮೊದಲ ಸುತ್ತಿನಲ್ಲಿ ಮಮತಾ ಬ್ಯಾನರ್ಜಿ ಗೆದ್ದಂತಾಗಿದೆ.
ಪಶ್ಚಿಮ ಬಂಗಾಳದ ದಾವೆಯನ್ನು ತಿರಸ್ಕರಿಸುವಂತೆ ಆಗ್ರಹಿಸಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಎತ್ತಿದ್ದ ಪ್ರಾಥಮಿಕ ಆಕ್ಷೇಪಗಳನ್ನು ಕೋರ್ಟ್ ತಿರಸ್ಕರಿಸಿತು. ಬಂಗಾಳ ಪರ ವಕೀಲರಾದ ಕಪಿಲ್ ಸಿಬಾಲ್ ಮತ್ತು ಅಭಿಷೇಕ್ ಸಾಂಘ್ವಿ ಮಂಡಿಸಿದ ವಾದವನ್ನು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರನ್ನು ಒಳಗೊಂಡ ನ್ಯಾಯಪೀಠ ಸ್ವೀಕರಿಸಿ, ವಿಚಾರಣೆಯನ್ನು ಆಗಸ್ಟ್ 13ಕ್ಕೆ ಮುಂದೂಡಿತು.
ಸಿಬಿಐ ಎನ್ನುವುದು ರಾಜ್ಯ ಅಥವಾ ಕೇಂದ್ರದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವ ಸಂಸ್ಥೆಯಲ್ಲ. ಆದ್ದರಿಂದ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ಯಾವುದೇ ಪರಿಹಾರವನ್ನು ಪ್ರತಿಪಾದಿಸುವಂತಿಲ್ಲ. ರಾಜ್ಯದ ಮುಖ್ಯವಾದ ಅಹವಾಲು ಇರುವುದು ಸಿಬಿಐ ವಿರುದ್ಧ. ಈ ಕೇಂದ್ರೀಯ ಏಜೆನ್ಸಿಯನ್ನು ಬಿಟ್ಟು, ರಾಜ್ಯ ಸರ್ಕಾರ ದಾವೆಯನ್ನು ಸಲ್ಲಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ವಾದ ಮಂಡಿಸಿತ್ತು.
"ಸಾಲಿಸಿಟರ್ ಜನರಲ್ ಅವರ ವಾದದಂತೆ ಸಿಬಿಐ ಸ್ವತಂತ್ರ ತನಿಖಾ ಸಂಸ್ಥೆ ಆಗಿದ್ದರೂ, ಸಂವಿಧಾನದ 12ನೇ ವಿಧಿಯ ಅನ್ವಯ ಇದು ಸರ್ಕಾರದ ಸಾಧನ. ಸಂವಿಧಾನದ 131ನೇ ವಿಧಿಯಂತೆ ಇದನ್ನು ಭಾರತ ಸರ್ಕಾರದ ಜತೆ ಹೋಲಿಸುವಂತಿಲ್ಲ ಎನ್ನುವುದು ನಮ್ಮ ಭಾವನೆ" ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
"ನಮ್ಮ ಅಭಿಪ್ರಾಯದಂತೆ, ಸಿಬಿಐ ಎನ್ನುವುದು ಒಂದು ಅಂಗ. ಇದನ್ನು ಭಾರತ ಸರ್ಕಾರದ ಅಧೀಕ್ಷಕತ್ವದಲ್ಲಿ ಡಿಎಸ್ಪಿಇ ಕಾಯ್ದೆಯಡಿ ಶಾಸನಾತ್ಮಕ ಸ್ಕೀಂ ಆಗಿ ಇದನ್ನು ಸ್ಥಾಪಿಸಲಾಗಿದೆ" ಎಂದು 74 ಪುಟಗಳ ತೀರ್ಪಿನಲ್ಲಿ ನ್ಯಾಯಮೂರ್ತಿ ಗವಾಯಿ ಹೇಳಿದ್ದಾರೆ.