ರಫಾ ಪಟ್ಟಣದ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯ ಬಗ್ಗೆ ಅಮೆರಿಕ ಹೇಳಿದ್ದೇನು?
PC: x.com/KenRoth
ವಾಷಿಂಗ್ಟನ್: ಗಾಝಾದ ರಫಾ ಪಟ್ಟಣದ ಮೇಲೆ ಇಸ್ರೇಲ್ ನಡೆಸಿದ ಭೀಕರ ವಾಯುದಾಳಿಯ ಬಗ್ಗೆ ಮೊಟ್ಟಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ, ಈ ಕಾರ್ಯಾಚರಣೆ ಅಷ್ಟೊಂದು ಆಕ್ರಮಣಕಾರಿ ದಾಳಿಯಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದೆ. ಈ ದಾಳಿ ಇಸ್ರೇಲ್ ಬಗೆಗಿನ ಅಮೆರಿಕದ ನಿಲುವು ಬದಲಾವಣೆಗೆ ನಾಂದಿಯಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು.
"ಅವರು ರಫಾವನ್ನು ಧ್ವಂಸಗೊಳಿಸಿದ್ದನ್ನು ನಾವು ಕಂಡಿಲ್ಲ. ದೊಡ್ಡ ಪಡೆಗಳೊಂದಿಗೆ ಅವರು ದಾಳಿ ನಡೆಸಿದ್ದನ್ನು ಮತ್ತು ತಳಹಂತದಲ್ಲಿ ಬಹು ಗುರಿಗಳನ್ನು ಇರಿಸಿಕೊಂಡು ಸಂಯೋಜಿತ ದಾಳಿ ನಡೆಸಿದ್ದನ್ನು ನಾವು ನೋಡಿಲ್ಲ" ಎಂದು ಶ್ವೇತಭವನ ಮಂಗಳವಾರ ಹೇಳಿಕೆ ನೀಡಿದೆ.
"ಅದು ಪ್ರಮುಖ ತಳಹಂತದ ಕಾರ್ಯಾಚರಣೆ. ನಾವು ಅದನ್ನು ನೋಡಿಲ್ಲ" ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ವಕ್ತಾರ ಜಾನ್ ಕಿರ್ಬೆ ಸುದ್ದಿಗಾರರಿಗೆ ತಿಳಿಸಿದರು. ಇಸ್ರೇಲ್ ಮೂರು ವಾರಗಳ ಕಾಲ ನಡೆಸಿದ ದಾಳಿ ಜಾಗತಿಕ ಮಟ್ಟದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಭಾನುವಾರ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 45 ಮಂದಿ ಮೃತಪಟ್ಟಿದ್ದು, ಪಶ್ಚಿಮ ಜಿಲ್ಲೆಯ ಪುನರ್ವಸತಿ ಶಿಬಿರ ಭಸ್ಮವಾಗಿತ್ತು.
ಇಸ್ರೇಲ್ ನ ಸೂಚನೆಯಂತೆ ಫೆಲಸ್ತೀನಿ ನಿರಾಶ್ರಿತರು ಆಸರೆ ಪಡೆದಿದ್ದ ರಫಾ ಮೇಲೆ ದೊಡ್ಡ ಪ್ರಮಾಣದ ಆಕ್ರಮಣಕಾರಿ ದಾಳಿ ನಡೆಸದಂತೆ ಬೈಡನ್ ಆಡಳಿತ ಇಸ್ರೇಲ್ಗೆ ಎಚ್ಚರಿಕೆ ನೀಡುತ್ತಾ ಬಂದಿತ್ತು. ನಾಗರಿಕರ ರಕ್ಷಣೆಗೆ ವಿಶ್ವಾಸಾರ್ಹ ಯೋಜನೆಯನ್ನು ರೂಪಿಸದೇ ಇಸ್ರೇಲಿ ಪಡೆಗಳು ಪ್ರಮುಖ ದಾಳಿ ನಡೆಸಿದಲ್ಲಿ, ಇಸ್ರೇಲ್ ಗೆ ಶಸ್ತ್ರಾಸ್ತ್ರ ಪೂರೈಕೆಯನ್ನು ಸ್ಥಗಿತಗೊಳಿಸುವುದಾಗಿ ಬೈಡನ್ ಬಹಿರಂಗ ಎಚ್ಚರಿಕೆ ನೀಡಿದ್ದರು.