ರೋಹಿತ್ ಶರ್ಮಾ ಜೊತೆಗಿನ ಬಾಂಧವ್ಯದ ಕುರಿತು ವಿರಾಟ್ ಕೊಹ್ಲಿ ಹೇಳಿದ್ದೇನು?

ವಿರಾಟ್ ಕೊಹ್ಲಿ , ರೋಹಿತ್ ಶರ್ಮಾ | PTI
ಮುಂಬೈ: 2025ನೇ ಋತುವಿನ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಮುಖಾಮುಖಿಗೂ ಮುನ್ನ, ರೋಹಿತ್ ಶರ್ಮರೊಂದಿಗಿನ ತಮ್ಮ ಸುದೀರ್ಘಾವಧಿಯ ಬಾಂಧವ್ಯದ ಕುರಿತು ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ಮಾತುಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವೆ ಮುನಿಸು ತಲೆದೋರಿದೆ ಎಂದು ಈ ಹಿಂದೆ ಮಾಧ್ಯಮಗಳಲ್ಲಿ ವದಂತಿಗಳು ಹರಡಿದ್ದರೂ, ತಮ್ಮಿಬ್ಬರ ನಡುವೆ ಪರಸ್ಪರ ಗೌರವ ಹಾಗೂ ಬಲಿಷ್ಠ ವೃತ್ತಿಪರ ಸಂಬಂಧವಿದೆ ಎಂದು ಅವರು ಮತ್ತೆ ದೃಢಪಡಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಾಹಿನಿಯಲ್ಲಿ ನಡೆದ ಸಂವಾದವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಕೊಹ್ಲಿ, “ನೀವು ಯಾರೊಂದಿಗಾದರೂ ಸುದೀರ್ಘ ಕಾಲ ಆಟವಾಡಿದರೆ, ಸಹಜವಾಗಿಯೇ ಅದರಿಂದ ಬಲಿಷ್ಠ ಬಾಂಧವ್ಯ ಬೆಳೆಯಲಿದೆ. ವಿಶೇಷವಾಗಿ, ಆಟದ ಕುರಿತು ನೀವು ಪರಸ್ಪರ ಸಾಕಷ್ಟು ತಿಳಿವಳಿಕೆಯನ್ನು ಹಂಚಿಕೊಳ್ಳುವಾಗ. ಆರಂಭಿಕ ವರ್ಷಗಳಲ್ಲಿ ನಾವು ಸ್ಥಿರವಾಗಿ ಒಬ್ಬರಿಂದ ಒಬ್ಬರು ಕಲಿಯುತ್ತಿದ್ದೆವು ಹಾಗೂ ಇದೇ ವೇಳೆ ನಾವಿಬ್ಬರೂ ವೃತ್ತಿಜೀವನದಲ್ಲಿ ಬೆಳವಣಿಗೆ ಸಾಧಿಸುತ್ತಿದ್ದೆವು” ಎಂದು ಹೇಳಿದ್ದಾರೆ.
“ವರ್ಷಗಳು ಕಳೆದಂತೆ ನಮ್ಮಿಬ್ಬರ ನಡುವೆ ವಿಶ್ವಾಸ ನಿರ್ಮಾಣವಾಯಿತು ಹಾಗೂ ನಾಯಕತ್ವದ ಪಾತ್ರದಲ್ಲಿ ನಿರ್ಧಾರ ಕೈಗೊಳ್ಳುವಾಗ ನಾವಿಬ್ಬರೂ ಪದೇ ಪದೇ ಒಂದೇ ಪುಟದಲ್ಲಿ ಕಂಡು ಬರುತ್ತಿದ್ದೆವು. ನಮ್ಮ ಸುದೀರ್ಘ ವೃತ್ತಿಜೀವನದೆಡೆಗೆ ಬೆಳಕು ಚೆಲ್ಲಿದಾಗ, ನಾವು ಹಂಚಿಕೊಂಡಿರುವ ಪಯಣದ ಬಗ್ಗೆ ಇಬ್ಬರೂ ಕೃತಜ್ಞರಾಗಿದ್ದೇವೆ ಹಾಗೂ ಹೆಮ್ಮೆ ಹೊಂದಿದ್ದೇವೆ. ನಾವಿಬ್ಬರೂ ಒಟ್ಟಿಗೆ ನಿರ್ಮಾಣ ಮಾಡಿರುವ ಸ್ಥಿರತೆ ಹಾಗೂ ನೆನಪುಗಳು ತೃಪ್ತಿಕರವಾಗಿದೆ” ಎಂದೂ ಅವರು ತಿಳಿಸಿದ್ದಾರೆ.
ಕಳೆದ 15 ವರ್ಷಗಳಲ್ಲಿ ಭಾರತದ ಕ್ರಿಕೆಟ್ ಯಶಸ್ಸಿನಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇಬ್ಬರೂ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಇಬ್ಬರ ನಡುವೆ ಭಿನ್ನಾಭಿಪ್ರಾಯ ತಲೆದೋರಿದೆ ಎಂಬ ವದಂತಿಗಳು ಪದೇ ಪದೇ ಹರಡಿದರೂ, ಇಬ್ಬರೂ ಅವನ್ನು ಸ್ಥಿರವಾಗಿ ಅಲ್ಲಗಳೆಯುತ್ತಾ ಬಂದಿದ್ದು, ಮೈದಾನದ ಒಳಗೆ ಹಾಗೂ ಹೊರಗೆ ವೃತ್ತಿಪರತೆಯನ್ನು ಕಾಯ್ದುಕೊಂಡು ಬಂದಿದ್ದಾರೆ.
ಈ ನಡುವೆ, ವಾಂಖೆಡೆ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಆತಿಥ್ಯ ನೀಡುತ್ತಿರುವ ಮುಂಬೈ ಇಂಡಿಯನ್ಸ್ ತಂಡವು, ಈ ಐಪಿಎಲ್ ಋತುವಿನಲ್ಲಿ ತನ್ನ ಎರಡನೆ ಗೆಲುವು ದಾಖಲಿಸುವತ್ತ ತನ್ನ ಚಿತ್ತ ನೆಟ್ಟಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ತನ್ನ ಇದುವರೆಗಿನ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ದಾಖಲಿಸಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಸಾಧಿಸಿದೆ.