"ನೀವೇನು ಸಾಬೀತು ಮಾಡಲು ಹೊರಟಿದ್ದೀರಿ?": ಬಿಎಸ್ಪಿ ಮುಖ್ಯಸ್ಥನ ಹತ್ಯೆಯ ದೃಶ್ಯಾವಳಿ ಬಿಡುಗಡೆ ಮಾಡಿದ ಪೊಲೀಸರಿಗೆ ಹೈಕೋರ್ಟ್ ಪ್ರಶ್ನೆ
ಕೆ.ಆರ್ಮ್ಸ್ಟ್ರಾಂಗ್ | PC : X
ಚೆನ್ನೈ: ತಮಿಳುನಾಡು ಬಿಎಸ್ಪಿ ಮುಖ್ಯಸ್ಥ ಕೆ.ಆರ್ಮ್ಸ್ಟ್ರಾಂಗ್ ಹತ್ಯೆಯ ದೃಶ್ಯಾವಳಿಯನ್ನು ಬಿಡುಗಡೆ ಮಾಡಿರುವ ಚೆನ್ನೈ ಪೊಲೀಸರ ಕ್ರಮವನ್ನು ಪ್ರಶ್ನಿಸಿರುವ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎನ್.ಆನಂದ್ ವೆಂಕಟೇಶ್, ನಾವೆಂಥ ವ್ಯವಸ್ಥೆಯನ್ನು ಹೊಂದಿದ್ದೇವೆ ಎಂದು ಕಿಡಿ ಕಾರಿದ್ದಾರೆ.
ಲೈಂಗಿಕ ದೌರ್ಜನ್ಯದ ಪ್ರತ್ಯೇಕ ಪ್ರಕರಣವೊಂದರ ವಿಚಾರಣೆ ನಡೆಸುತ್ತಿದ್ದ ನ್ಯಾ. ಎನ್.ಆನಂದ್ ವೆಂಕಟೇಶ್, ವಿಚಾರಣೆಯ ನಡುವೆ ತಮಿಳುನಾಡು ಬಿಎಸ್ಪಿ ಮುಖ್ಯಸ್ಥ ಕೆ.ಆರ್ಮ್ಸ್ಟ್ರಾಂಗ್ ಹತ್ಯೆಯ ದೃಶ್ಯಾವಳಿಯನ್ನು ಬಿಡುಗಡೆ ಮಾಡಿರುವ ಚೆನ್ನೈ ಪೊಲೀಸರ ಕ್ರಮವನ್ನು ಪ್ರಸ್ತಾಪಿಸಿ, ತಮ್ಮ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಪೊಲೀಸರು ಬಿಡುಗಡೆ ಮಾಡಿದ್ದ ಕೆ.ಆರ್ಮ್ಸ್ಟ್ರಾಂಗ್ ಹತ್ಯೆಯ ದೃಶ್ಯಾವಳಿಗಳನ್ನು ತಮಿಳು ಸುದ್ದಿ ವಾಹಿನಿಗಳು ರವಿವಾರ ಪ್ರಸಾರ ಮಾಡಿದ್ದವು. ಈ ವಿಷಯವನ್ನು ವಿಚಾರಣೆಯ ನಡುವೆ ಪ್ರಸ್ತಾಪಿಸಿದ ನ್ಯಾ. ಎನ್.ಆನಂದ್ ವೆಂಕಟೇಶ್, ಅವಧಿಪೂರ್ವವಾಗಿ ಇಂತಹ ಮಹತ್ವದ ಸಾಕ್ಷ್ಯಗಳನ್ನು ಬಿಡುಗಡೆ ಮಾಡುವುದರಿಂದ ನ್ಯಾಯಾಂಗ ಪ್ರಕ್ರಿಯೆಯನ್ನು ಹತ್ತಿಕ್ಕಿದಂತಾಗುತ್ತದೆ ಎಂದರು. "ಒಂದು ವೇಳೆ ತನಿಖೆಯ ಸಂದರ್ಭದಲ್ಲಿ ಸಂಗ್ರಹಿಸಲಾದ ಮಹತ್ವದ ಮಾಹಿತಿಗಳನ್ನು ಹೀಗೆ ಸೋರಿಕೆ ಮಾಡಿದರೆ ಹಾಗೂ ಶಂಕಿತರ ಗುರುತನ್ನು ಮಾಧ್ಯಮಗಳು ಹೀಗೆ ಬಹಿರಂಗಪಡಿಸಿದರೆ, ಕ್ರಿಮಿನಲ್ ನ್ಯಾಯಾಲಯಗಳು ಪೂರ್ಣಪ್ರಮಾಣದ ವಿಚಾರಣೆಯ ಸಂದರ್ಭದಲ್ಲಿ ಅವರನ್ನು ದೋಷಿಗಳನ್ನಾಗಿಸುವುದು ತುಂಬಾ ಕಠಿಣವಾಗುತ್ತದೆ" ಎಂದು ಅವರು ಅಭಿಪ್ರಾಯಪಟ್ಟರು.
ತಮಿಳುನಾಡು ಬಿಎಸ್ಪಿ ಮುಖ್ಯಸ್ಥ ಕೆ.ಆರ್ಮ್ಸ್ಟ್ರಾಂಗ್ ಹತ್ಯೆ ಪ್ರಕರಣದ ಆರೋಪಿಗಳ ಪೈಕಿ ಓರ್ವನಾಗಿದ್ದ ಕೆ.ತಿರತುವೆಂಗಡಂನನ್ನು ಚೆನ್ನೈ ಪೊಲೀಸರು ಎನ್ಕೌಂಟರ್ನಲ್ಲಿ ಹತ್ಯೆಗೈದಿದ್ದರು. ಇದಾದ ನಂತರ, ಈ ಪ್ರಕರಣವು ತೀವ್ರ ವಿವಾದಕ್ಕೀಡಾಗಿದೆ.