ಮುಂದೆ ನಡೆಯಲಿರುವುದು ಎರಡು ವಿಭಿನ್ನ ಸಿದ್ಧಾಂತಗಳ ನಡುವಿನ ಹೋರಾಟ: ರಾಹುಲ್ ಗಾಂಧಿ
"ಬಿಜೆಪಿಗೆ ಸಂವಿಧಾನವನ್ನು ಬದಲಾಯಿಸುವಷ್ಟು ಧೈರ್ಯವಿಲ್ಲ"
ರಾಹುಲ್ ಗಾಂಧಿ | Photo: X \ @INCIndia
ಮುಂಬೈ: ಮುಂದಿನ ಹೋರಾಟ ಎರಡು ವಿಭಿನ್ನ ಸಿದ್ಧಾಂತಗಳ ನಡುವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರವಿವಾರ ಹೇಳಿದ್ದಾರೆ. ಸತ್ಯ ಮತ್ತು ಹಿಂದೂಸ್ತಾನ ತಮ್ಮ ಪರ ನಿಂತಿದೆ ಎಂದು ಹೇಳಿದ ಅವರು, ಬಿಜೆಪಿಗೆ ಸಂವಿಧಾನವನ್ನು ಬದಲಾಯಿಸುವಷ್ಟು ಧೈರ್ಯವಿಲ್ಲ ಎಂದಿದ್ದಾರೆ.
ದಕ್ಷಿಣ ಮುಂಬೈನ ತೇಜ್ಪಾಲ್ ಹಾಲ್ನಲ್ಲಿ ನಾಗರಿಕ ಸಮಾಜದ ಕಾರ್ಯಕರ್ತರು ಮತ್ತು ಸಂಘಟನೆಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಭಾರತ್ ಜೋಡೋ ನ್ಯಾಯ್ ಯಾತ್ರೆಯ ಶಕ್ತಿ ನಾನು ಮಾತ್ರವಲ್ಲ, ನನ್ನೊಂದಿಗೆ ನಡೆದ ಕೋಟ್ಯಂತರ ಭಾರತೀಯರು. ಈ ಹೋರಾಟ ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿ ಅಥವಾ ಕಾಂಗ್ರೆಸ್ ಮತ್ತು ಬಿಜೆಪಿಗೆ ಸೀಮಿತವಾಗಿಲ್ಲ. ಎರಡು ಸಿದ್ಧಾಂತಗಳ ನಡುವಿನ ಹೋರಾಟ ಇದು” ಎಂದು ಹೇಳಿದ್ದಾರೆ.
“ಒಂದು ಸಿದ್ಧಾಂತ ಹೇಳುತ್ತದೆ, ದೇಶವನ್ನು ಮೇಲಿನಿಂದ ನಡೆಸಲಾಗುವುದು ಮತ್ತು ಎಲ್ಲರೂ ಆದೇಶಗಳನ್ನು ಅನುಸರಿಸಬೇಕು ಎಂದು. ಎರಡನೆಯದು ಹೇಳುತ್ತದೆ, ದೇಶವನ್ನು ವಿಕೇಂದ್ರೀಕೃತ ರೀತಿಯಲ್ಲಿ ನಡೆಸಬೇಕೆಂದು. ಧಾರ್ಮಿಕ ಪರಿಭಾಷೆಯಲ್ಲಿ, ನಾವು ಇದನ್ನು ʼಶಿವ ಕಿ ಬಾರತ್ʼ ಎಂದು ಕರೆಯಬಹುದು” ಎಂದು ರಾಹುಲ್ ಗಾಂಧಿ ಹೇಳಿದರು.
“ಇದು ಎರಡು ವಿಭಿನ್ನ ಸಿದ್ಧಾಂತಗಳ ಯುದ್ಧ ಎಂದು ನಾವು ಅರಿತುಕೊಳ್ಳಬೇಕು. ಭಯಪಡಬೇಡಿ ಎಂದು ನಾನು ನಿಮಗೆಲ್ಲರಿಗೂ ಹೇಳಲು ಬಯಸುತ್ತೇನೆ. ಬಿಜೆಪಿಯವರು ಸಂವಿಧಾನ ಮತ್ತು ಎಲ್ಲವನ್ನೂ ಬದಲಾಯಿಸುತ್ತಾರೆ ಎಂದು ಕೆಲವರು ಹೇಳುತ್ತಾರೆ. ಅವರಿಗೆ ಸಂವಿಧಾನವನ್ನು ಬದಲಾಯಿಸುವ ಧೈರ್ಯವಿಲ್ಲ ಎಂದು ನಾನು ನಿಮಗೆ ಹೇಳುತ್ತೇನೆ. ಈ ಯುದ್ಧದಲ್ಲಿ ಸತ್ಯ ಮತ್ತು ಹಿಂದೂಸ್ಥಾನ ನಮ್ಮೊಂದಿಗೆ ನಿಂತಿದೆ” ಎಂದು ರಾಹುಲ್ ಗಾಂಧಿ ಹೇಳಿದರು.
ಮಣಿಪುರದಲ್ಲಿ ಪ್ರಾರಂಭವಾದ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆಯು ದಾದರ್ನ ಚೈತ್ಯ ಭೂಮಿಯಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿದ ನಂತರ ಶನಿವಾರ ಮುಂಬೈನಲ್ಲಿ ಮುಕ್ತಾಯಗೊಂಡಿತು.
ತಮ್ಮ ಯಾತ್ರೆಯನ್ನು ಮೆಲುಕು ಹಾಕಿದ ಅವರು, ಭಾರತವು ದ್ವೇಷ ಮತ್ತು ಹಗೆತನದ ದೇಶವಲ್ಲ, ಬದಲಾಗಿ ಪ್ರೀತಿ ಮತ್ತು ಸಹಾನುಭೂತಿಯ ದೇಶವಾಗಿದೆ. ಬಡವರು, ದಲಿತರು, ಮಹಿಳೆಯರ ಮೇಲಿನ ಅನ್ಯಾಯವು ದೇಶದಲ್ಲಿ ದ್ವೇಷ ಬೆಳೆಯಲು ಮೂಲ ಕಾರಣವಾಗಿದೆ ಎಂದು ಹೇಳಿದರು.
“ನಾವು ಸರ್ಕಾರದಲ್ಲಿದ್ದಾಗ ಕೃಷಿ ಸಾಲ ಮನ್ನಾ ವಿಚಾರವನ್ನು ತರುವಾಗ, ರೈತರು ಸೋಮಾರಿಗಳಾಗುತ್ತಾರೆ ಎಂದು ವಿರೋಧಿಸಲಾಗಿತ್ತು. ನಾವು ಎಂಎನ್ಆರ್ಇಜಿಎ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ,) ತರುವಾಗ ಬಡವರು ಹಾಳಾಗುತ್ತಾರೆ ಎಂದು ನಮಗೆ ಹೇಳಲಾಯಿತು. ಆದರೆ, ಈಗ ಕೇವಲ 20-25 ಜನರಿಗೆ ಸೇರಿದ 16 ಲಕ್ಷ ಕೋಟಿ ರೂ. ಬ್ಯಾಂಕ್ ಸಾಲವನ್ನು ಮನ್ನಾ ಮಾಡಿದಾಗ, ಅದು ಅವರನ್ನು ಹಾಳು ಮಾಡುವುದಿಲ್ಲವೇ? ಎಂದು ಗಾಂಧಿ ಪ್ರಶ್ನಿಸಿದ್ದಾರೆ.
ಈ ವೇಳೆ, ಮುಂಬೈ ಮತ್ತು ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರೊಂದಿಗೆ ಆಗಸ್ಟ್ ಕ್ರಾಂತಿ ಮೈದಾನದಿಂದ ಮಣಿ ಭವನದವರೆಗೆ ಪಾದಯಾತ್ರೆ ನಡೆಸಿದರು.