ಕೇರಳ | ವಿವಾದಕ್ಕೆ ಕಾರಣವಾದ IAS ಅಧಿಕಾರಿಗಳ 'ಮಲ್ಲು ಹಿಂದೂ' ವಾಟ್ಸಾಪ್ ಗ್ರೂಪ್!
ನನ್ನ ಫೋನ್ ಹ್ಯಾಕ್ ಆಗಿದೆ ಎಂದ 'ಅಡ್ಮಿನ್ ಅಧಿಕಾರಿ'
Photo credit: keralakaumudi.com
ತಿರುವನಂತಪುರಂ: ದೀಪಾವಳಿಯ ದಿನ ಅಕ್ಟೋಬರ್ 31 ರಂದು ಮೊಬೈಲ್ ತೆರೆದು ನೋಡಿದರೆ, ಕೇರಳ ಕೇಡರ್ ನ ಐಎಎಸ್ ಅಧಿಕಾರಿಗಳಿಗೆ ಅಚ್ಚರಿ ಕಾದಿತ್ತು. ಅವರನ್ನು 'ಮಲ್ಲು ಹಿಂದೂ ಆಫೀಸರ್ಸ್' ಎಂಬ ವಾಟ್ಸಾಪ್ ಗ್ರೂಪ್ ಗೆ ಸೇರಿಸಲಾಗಿತ್ತು. ವಿಶೇಷವೆಂದರೆ ಈ ಗ್ರೂಪ್ ರಚಿಸಿದ್ದೂ ಒಬ್ಬ IAS ಅಧಿಕಾರಿ!
ಕೇರಳ ಕೇಡರ್ ನಲ್ಲಿ ಸೇವೆಯಲ್ಲಿರುವ ಕೇವಲ ಹಿಂದೂ ಅಧಿಕಾರಿಗಳನ್ನು ಒಳಗೊಂಡ ವಾಟ್ಸಾಪ್ ಗ್ರೂಪ್ ಅನ್ನು ಐಎಎಸ್ ಅಧಿಕಾರಿ ಕೆ ಗೋಪಾಲಕೃಷ್ಣನ್ ಬಳಸುತ್ತಿದ್ದ ಫೋನ್ ಸಂಖ್ಯೆಯಿಂದ ರಚಿಸಲಾಗಿದೆ. ಅನೇಕ ಅಧಿಕಾರಿಗಳು ಇದು ಸೂಕ್ತವಲ್ಲ. ಅಧಿಕಾರಿಗಳು ಎತ್ತಿಹಿಡಿಯುವ ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿದೆ ಎಂದು ಹಲವು ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು.
ವಾಟ್ಸಾಪ್ ಗ್ರೂಪ್ ರಚನೆಯಾದ ಒಂದು ದಿನದ ನಂತರ ಅದನ್ನು ಡಿಲೀಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. 'ಗ್ರೂಪ್ ಅಡ್ಮಿನ್' IAS ಅಧಿಕಾರಿ ಗೋಪಾಲಕೃಷ್ಣನ್ ತಮ್ಮ ಫೋನ್ ಹ್ಯಾಕ್ ಆಗಿದೆ ಎಂದು ಹೇಳಿಕೊಂಡಿದ್ದಾರೆ. ತನ್ನ ಒಪ್ಪಿಗೆಯಿಲ್ಲದೆ ಫೋನ್ ನಲ್ಲಿರುವ ಸಂಪರ್ಕ ಸಂಖ್ಯೆಗಳನ್ನು ಬಳಸಿಕೊಂಡು ಅನೇಕ ವಾಟ್ಸಾಪ್ ಗ್ರೂಪ್ ರಚಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಅವರು ಪೊಲೀಸ್ ದೂರು ಕೂಡ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಹಿರಿಯ ಐಪಿಎಸ್ ಅಧಿಕಾರಿ ಎಂ.ಆರ್.ಅಜಿತ್ ಕುಮಾರ್ ಇತ್ತೀಚೆಗೆ ಆರೆಸ್ಸೆಸ್ ನಾಯಕರನ್ನು ಭೇಟಿ ಮಾಡಿದ್ದು ವಿವಾದದ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಈ ಘಟನೆ ಮುನ್ನೆಲೆಗೆ ಬಂದಿದೆ. ಅಜಿತ್ ಕುಮಾರ್ ಅವರ ಭೇಟಿ ಬಹಿರಂಗವಾದ ಬೆನ್ನಲ್ಲೇ ಅವರನ್ನು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಸ್ಥಾನದಿಂದ ತೆಗೆದುಹಾಕಲಾಗಿತ್ತು.
ಆರೆಸ್ಸೆಸ್ ನಾಯಕರ ರಹಸ್ಯ ಭೇಟಿ ಅಜಿತ್ ಅವರ ವರ್ಗಾವಣೆಗೆ ಕಾರಣ ಎಂದು ಸರ್ಕಾರ ಅಧಿಕೃತವಾಗಿ ಒಪ್ಪಿಕೊಂಡಿಲ್ಲವಾದರೂ, ಎಲ್ಡಿಎಫ್ ಮಿತ್ರಪಕ್ಷ ಸಿಪಿಐ ಕೂಡ ಘಟನೆಯ ಬಗ್ಗೆ ಕಠಿಣ ನಿಲುವು ತೆಗೆದುಕೊಂಡ ನಂತರ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ.
"ಅಧಿಕಾರಿಗಳಲ್ಲಿ ಹಲವಾರು ವಾಟ್ಸಾಪ್ ಗ್ರೂಪ್ ಗಳಿವೆ. ಆದರೆ ಧಾರ್ಮಿಕವಾಗಿ ಗುರುತಿಸಿಕೊಳ್ಳುವ ವಾಟ್ಸಾಪ್ ಗ್ರೂಪ್ ಹೊಸದು" ಎಂದು ಹೆಸರು ಬಹಿರಂಗ ಪಡಿಸಬಾರದು ಎಂಬ ಷರತ್ತಿನ ಮೇಲೆ ಹಿರಿಯ ಅಧಿಕಾರಿಯೊಬ್ಬರು Times of India ಗೆ ತಿಳಿಸಿದರು.
ಕಿರಿಯ ಮತ್ತು ಹಿರಿಯ ಅಧಿಕಾರಿಗಳ ವಾಟ್ಸಾಪ್ ಗ್ರೂಪ್ ಗಳನ್ನು ವಿವಿಧ ಸೇವೆಗಳಿಗೆ, ಸಂವಹನ ಉದ್ದೇಶಕ್ಕಾಗಿ ರಚಿಸಲಾಗಿದೆ. ಆದರೆ ಅವುಗಳಲ್ಲಿ ಹಲವು ಹೆಚ್ಚಾಗಿ ನಿಷ್ಕ್ರಿಯ ಸ್ವರೂಪದಲ್ಲಿವೆ ಎಂದು ಅವರು ಹೇಳಿದರು.
ಧಾರ್ಮಿಕ ಆಧಾರದ ಮೇಲೆ ರಚಿಸಿದ ಗ್ರೂಪ್ ಮೇಲೆ ಹಲವು ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅವರು ಗುಪ್ತಚರ ಇಲಾಖೆಗೆ ಮಾಹಿತಿ ನೀಡಿದ್ದು, ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.