ಗೋಧಿ ಬೆಂಬಲ ಬೆಲೆ ಹೆಚ್ಚಳ: 2014ರ ಬಳಿಕ ಗರಿಷ್ಠ
ಹೊಸದಿಲ್ಲಿ: ಹಿಂಗಾರು ಹಂಗಾಮಿನ ಆರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಬುಧವಾರ ಹೆಚ್ಚಿಸಿದೆ. ಗೋಧಿಯ ಬೆಂಬಲ ಬೆಲೆ ಪ್ರತಿ ಕ್ವಿಂಟಲ್ಗೆ 150 ರೂಪಾಯಿ ಹೆಚ್ಚಳವಾಗಿದೆ. 2024-2025ನೇ ಬೆಳೆ ಋತುವಿನಲ್ಲಿ ಗೋಧಿ ಬೆಳೆಗಾರರಿಗೆ ಪ್ರತಿ ಕ್ವಿಂಟಲ್ ಗೆ 2125 ರೂಪಾಯಿಯ ಬದಲಾಗಿ 2275 ರೂಪಾಯಿ ಲಭ್ಯವಾಗಲಿದೆ.
ಗೋಧಿ ಬೆಳೆಯುವ ಪ್ರಮುಖ ರಾಜ್ಯಗಳಾದ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಇದು 2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕನಿಷ್ಠ ಬೆಂಬಲ ಬೆಲೆಯಲ್ಲಿ ಮಾಡಿರುವ ಗರಿಷ್ಠ ಹೆಚ್ಚಳವಾಗಿದೆ.
2014-15ರಲ್ಲಿ ಕೇಂದ್ರ ಸರ್ಕಾರ ಗೋಧಿ ಮೇಲಿನ ಬೆಂಬಲ ಬೆಲೆಯನ್ನು 40 ರೂಪಾಯಿಗಳಷ್ಟು ಹೆಚ್ಚಿಸಿತ್ತು. 2023-24ರಲ್ಲಿ ಈ ಪ್ರಮಾಣ ಕ್ವಿಂಟಲ್ಗೆ 110 ರೂಪಾಯಿ ಆಗಿದೆ. ಸರ್ಕಾರದ ಆಮದು ವೆಚ್ಚವನ್ನು ಕಡಿಮೆ ಮಾಡುವ ಪ್ರಯತ್ನವಾಗಿ ಬೇಳೆಕಾಳುಗಳು ಹಾಗೂ ಎಣ್ಣೆಬೀಜಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ಆದ್ಯತೆ ನೀಡಿರುವ ಸಂದರ್ಭದಲ್ಲಿ ಈ ಗರಿಷ್ಠ ಏರಿಕೆ ಮಾಡಲಾಗಿದೆ.
ಆರ್ಥಿಕ ವ್ಯವಹಾರಗಳ ಮೇಲಿನ ಸಂಪುಟ ಸಮಿತಿ ಬುಧವಾರ ಬೇಳೆಕಾಳುಗಳು ಮತ್ತು ಸಾಸಿವೆ ಹಾಗೂ ಎಣ್ಣೆಬೀಜಗಳ ಕನಿಷ್ಠ ಬೆಂಬಲ ಬೆಲೆಯನ್ನು ಕೂಡಾ ಹೆಚ್ಚಿಸಲು ಅನುಮೋದನೆ ನೀಡಿದ್ದು, ಈ ಎರಡು ವರ್ಗಗಳು ಕ್ರಮವಾಗಿ ರೂ. 425 ಮತ್ತು 200 ರೂಪಾಯಿ ಹೆಚ್ಚಳವನ್ನು ಕಂಡಿವೆ. ಬಾರ್ಲಿ, ಕಡಲೆ ಮತ್ತು ಸೂರ್ಯಕಾಂತಿ ಕೂಡಾ ಕನಿಷ್ಠ ಬೆಂಬಲ ಬೆಲೆಯಲ್ಲಿ ಹೆಚ್ಚಳ ಕಂಡಿವೆ.