ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಯಾವಾಗ ಜಾರಿಯಾಗಲಿದೆ?
Photo- PTI
ಹೊಸದಿಲ್ಲಿ: ಸೋಮವಾರ ಭಾರತೀಯ ಜನತಾ ಪಕ್ಷ ನೇತೃತ್ವದ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದೆ.
ಸಂವಿಧಾನ (128 ತಿದ್ದುಪಡಿ) ಮಸೂದೆ, 2023 ಮಹಿಳೆಯರಿಗೆ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮೂರನೆ ಒಂದರಷ್ಟು ಸ್ಥಾನಗಳನ್ನು ಮೀಸಲಿಡಲಿದೆ. ಈ ಮಸೂದೆಯಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಇರುವ ಮೀಸಲಾತಿಯು ಅನ್ವಯವಾಗಲಿದೆ. ಗಮನಾರ್ಹ ಸಂಗತಿಯೆಂದರೆ, ಇತರೆ ಹಿಂದುಳಿದ ವರ್ಗಗಳಿಗೆ ಯಾವುದೇ ಮಹಿಳಾ ಮೀಸಲಾತಿಯನ್ನು ಒದಗಿಸಲಾಗಿಲ್ಲ.
ಇದಕ್ಕೂ ಮುನ್ನ 2008ರಲ್ಲಿ, ಸಂಸತ್ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಮಂಡಿಸಿತ್ತು. ಈ ಮಸೂದೆಯು 2010ರಲ್ಲಿ ರಾಜ್ಯಸಭೆಯಲ್ಲಿ ಅನುಮೋದನೆಗೊಂಡಿತಾದರೂ, ಲೋಕಸಭೆಯಲ್ಲಿ ಮಂಡನೆಯಾಗಲಿಲ್ಲ.
2008 ಹಾಗೂ 2023ರಲ್ಲಿ ಮಂಡನೆಯಾಗಿರುವ ಮಸೂದೆಗಳಲ್ಲಿನ ಪ್ರಮುಖ ವ್ಯತ್ಯಾಸವೆಂದರೆ, ಮಂಗಳವಾರ ಮಂಡನೆಯಾಗಿರುವ ಮಸೂದೆಯ ಪ್ರಕಾರ, ಮಹಿಳಾ ಮೀಸಲಾತಿ ಜಾರಿಯು ಕ್ಷೇತ್ರ ಪುನರ್ವಿಂಗಡಣೆ ಅಥವಾ ಕ್ಷೇತ್ರಗಳ ಗಡಿಗಳ ಮರು ನಿಗದಿಯನ್ನು ಅವಲಂಬಿಸಿದೆ.
ಈ ಷರತ್ತಿನ ಅರ್ಥವೆಂದರೆ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿನ ಮಹಿಳಾ ಮೀಸಲಾತಿಯು 2029ರ ಲೋಕಸಭಾ ಚುನಾವಣೆವರೆಗೆ ಜಾರಿಯಾಗುವುದು ಅಸಾಧ್ಯ. ಅದಕ್ಕೆ ಕಾರಣವೂ ಇದೆ. ಮಸೂದೆಯ ಪ್ರಕಾರ, ಮಸೂದೆಯು ಅಂಗೀಕಾರವಾದ ನಂತರ ನಡೆಸುವ ಮೊದಲ ಜನಗಣತಿಯನ್ನು ಆಧರಿಸಿ ಕ್ಷೇತ್ರ ಪುನರ್ವಿಂಗಡಣೆ ಕೆಲಸವು ಮುಕ್ತಾಯವಾದ ನಂತರವಷ್ಟೆ ಮಹಿಳೆಯರಿಗೆ ಸ್ಥಾನಗಳನ್ನು ಮೀಸಲಿಡಲಾಗುತ್ತದೆ.
2002ರಲ್ಲಿ ಸಂವಿಧಾನದ 82ನೇ ವಿಧಿಗೆ ತರಲಾಗಿರುವ ತಿದ್ದುಪಡಿಯ ಪ್ರಕಾರ, 2026ರ ನಂತರ ನಡೆಯಲಿರುವ ಮೊದಲ ಜನಗಣತಿಯನ್ನು ಆಧರಿಸಿ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯು ಪ್ರಾರಂಭವಾಗಲಿದೆ.
ವಾಸ್ತವವಾಗಿ, ಇದರ ಪ್ರಕಾರ, ಜನಗಣತಿಯು 2031ರಲ್ಲಿ ನಡೆಯಬೇಕಿದೆ. ಆದರೆ, ಭಾರತದ ಕಡೆಯ ಜನಗಣತಿಯು ಕೊರೊನಾ ಸಾಂಕ್ರಾಮಿಕದ ಕಾರಣಕ್ಕೆ ವಿಳಂಬವಾಗಿರುವುದರಿಂದ, ಕಾಲಮಿತಿಯನ್ನು ಬದಲಾಯಿಸಲಾಗಿದೆ.
ಭಾರತದಲ್ಲಿನ ಕಡೆಯ ಜನಗಣತಿಯು 2011ರಲ್ಲಿ ನಡೆದಿತ್ತು. 2020ರಲ್ಲಿ ಭಾರತವು ಜನಗಣತಿಯ ಪ್ರಥಮ ಹಂತವನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿತ್ತು. ಈ ಸಿದ್ಧತೆಯಲ್ಲಿ ಮನೆಗಣತಿಯನ್ನು ಸಂಗ್ರಹಿಸಬೇಕಾಗಿತ್ತು. ಆದರೆ, ಆ ಹೊತ್ತಿಗೆ ಕೊರೊನಾ ವೈರಸ್ ದಾಳಿ ನಡೆಸಿತ್ತು. ಇದಾದ ನಂತರ, ಮೂರು ಬಾರಿ ಜನಗಣತಿ ಪ್ರಕ್ರಿಯೆಯು ವಿಳಂಬಗೊಂಡಿದ್ದು, 2024ರ ನಂತರವಷ್ಟೆ ಜನಗಣತಿ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇಂತಹ ಪರಿಸ್ಥಿತಿಯಲ್ಲಿ, ಜನಗಣತಿ ಪ್ರಕ್ರಿಯೆಯು 2025ಕ್ಕಿಂತ ಮುಂಚಿತವಾಗಿ ನಡೆಯಲು ಸಾಧ್ಯವಿಲ್ಲವೆಂದು ನಿರೀಕ್ಷಿಸಲಾಗಿದೆ. ಈ ಪ್ರಕ್ರಿಯೆಯು 2024ರಲ್ಲಿ ಮನೆ ಗಣತಿ ಪ್ರಕ್ರಿಯೆಯು ನಡೆದ ನಂತರವಷ್ಟೇ ನಡೆಯಬೇಕು ಎಂಬ ಷರತ್ತಿಗೊಳಪಟ್ಟಿದೆ. ನಂತರ 2025ರಲ್ಲಿ ನೈಜ ಜನಗಣತಿ ನಡೆಯಲಿದ್ದು, ಅದರ ದತ್ತಾಂಶವು 2026 ಅಥವಾ 2027ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಈ ಪ್ರಕ್ರಿಯೆಯ ನಂತರ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯು ನಡೆಯಲಿದೆ. ಈ ಪ್ರಕ್ರಿಯೆಯ ಸಂದರ್ಭದಲ್ಲಿ ಕ್ಷೇತ್ರ ಪುನರ್ವಿಂಗಡಣೆ ಆಯೋಗವನ್ನು ರಚಿಸಬೇಕಿದ್ದು, ಈ ಆಯೋಗವು ಜನಸಂಖ್ಯಾ ದತ್ತಾಂಶ ಹಾಗೂ ಹಾಲಿಯಿರುವ ಕ್ಷೇತ್ರಗಳ ಕುರಿತು ಪರಿಶೀಲಿಸಬೇಕಿದೆ. ಇದಲ್ಲದೆ, ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸುವುದಕ್ಕೂ ಮುನ್ನ, ಸಂಬಂಧಿತ ವ್ಯಕ್ತಿಗಳೊಂದಿಗೆ ಸಭೆಗಳನ್ನು ನಡೆಸಬೇಕಿದೆ.
ಮುಂಬರುವ ಜನಗಣತಿಯು 2026ರರೊಳಗೆ ಮುಕ್ತಾಯಗೊಂಡರೆ, ಸಂವಿಧಾನದ 82ನೇ ವಿಧಿಯನ್ವಯ ಮಾತ್ರ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯು ನಡೆಯಲಿದೆ. ಒಂದು ವೇಲೆ ಸರ್ಕಾರವು ನೈಜ ಕಾಲಾವಧಿ ಅಥವಾ 2036ಕ್ಕೆ ಅಂಟಿಕೊಳ್ಳಲು ಬಯಸಿದರೆ ಅಥವಾ ಸತತ ಎರಡು ಜನಗಣತಿಗಳ ನಡುವಿನ 10 ವರ್ಷಗಳ ಅಂತರವನ್ನು ಮುಂದುವರಿಸಲು ಬಯಸಿದರೆ ಈ ಜನಗಣತಿಯು 2031ರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಇಂಥ ಸಂದರ್ಭದಲ್ಲಿ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿಯು 2034 ಅಥವಾ 2039ರಲ್ಲಿ ಮಾತ್ರ ಜಾರಿಗೊಳ್ಳುವ ಸಾಧ್ಯತೆ ಇದೆ.
ಬಾಕಿಯಿರುವ ಜನಗಣತಿಯು 2026ರ ನಂತರವೂ ಮುಂದುವರಿದರೆ ಮಾತ್ರ, ಈ ಮಸೂದೆಯಲ್ಲಿನ ಮಹಿಳಾ ಮೀಸಲಾತಿಯು 2029ರ ಲೋಕಸಭಾ ಚುನಾವಣೆಗೂ ಮುನ್ನ ಜಾರಿಯಾಗಲಿದೆ.
ಸೌಜನ್ಯ: scroll.in