ಮುಸ್ಲಿಮರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಾಗ, ನಿಮ್ಮ ಪೂರ್ವಜರು ಕ್ಷಮಾಪಣಾ ಅರ್ಜಿ ಬರೆಯುತ್ತಿದ್ದರು: ಬಿಜೆಪಿ ವಿರುದ್ಧ ಗೌರವ್ ಗೊಗೊಯಿ ವಾಗ್ದಾಳಿ
ವಕ್ಫ್ ತಿದ್ದುಪಡಿ ಮಸೂದೆಯು ಸಂವಿಧಾನದ ಮೇಲಿನ ದಾಳಿ ಎಂದ ಕಾಂಗ್ರೆಸ್ ನಾಯಕ

Screengrab:X/@ANI
ಹೊಸದಿಲ್ಲಿ: ಇಂದು ಮಂಡನೆಯಾದ ವಕ್ಫ್ ತಿದ್ದುಪಡಿ ಮಸೂದೆಯು ಲೋಕಸಭೆಯಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ ನೇತೃತ್ವದ ಸರಕಾರ ಮಂಡಿಸಿರುವ ವಕ್ಫ್ ತಿದ್ದುಪಡಿ ಮಸೂದೆಯು ಸಂವಿಧಾನದ ಮೇಲಿನ ದಾಳಿಯಾಗಿದೆ ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ ತೀವ್ರವಾಗಿ ಆಕ್ಷೇಪಿಸಿದರು.
“ವಕ್ಫ್ ತಿದ್ದುಪಡಿ ಮಸೂದೆಯು ಬ್ರಿಟಿಷರ ಒಡೆದಾಳುವ ನೀತಿಯ ಆಧುನಿಕ ಅಳವಡಿಕೆಯಾಗಿದೆ. ನಮ್ಮ ಪೂರ್ವಜರು ಬ್ರಿಟಿಷರ ವಿರುದ್ಧ ಹೋರಾಡುವಾಗ, ಕೆಲವರು ಕ್ಷಮಾಪಣಾ ಅರ್ಜಿಗಳನ್ನು ಬರೆಯುವುದರಲ್ಲಿ ಮಗ್ನರಾಗಿದ್ದರು” ಎಂದು ಸಾವರ್ಕರ್ ಹೆಸರನ್ನು ಉಲ್ಲೇಖಿಸದೆ ಅವರು ಬಿಜೆಪಿಯ ವಿರುದ್ಧ ಟೀಕಾಪ್ರಹಾರ ನಡೆಸಿದರು.
1857ರಲ್ಲಿ ನಡೆದ ಸಿಪಾಯಿ ದಂಗೆಯಲ್ಲಿ ಮಂಗಲಪಾಂಡೆಯ ಸ್ನೇಹಿತರು ಸೇರಿದಂತೆ ಹಲವು ಮುಸ್ಲಿಂ ನಾಯಕರು ತಮ್ಮ ಜೀವತ್ಯಾಗ ಮಾಡಿದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಮುಸ್ಲಿಂ ನಾಯಕರು ಇತರರೊಂದಿಗೆ ಕೈಜೋಡಿಸಿದ್ದರು. 1930ರಲ್ಲಿ ನಡೆದ ದಂಡಿ ಸತ್ಯಾಗ್ರಹ ಯಾತ್ರೆಗೆ ಮುಸ್ಲಿಂ ಹೋರಾಟಗಾರರು ಭಾರಿ ಬೆಂಬಲ ನೀಡಿದ್ದರು. ಮುಸ್ಲಿಮರು 1956ರಲ್ಲಿ ಬ್ರಿಟಿಷರ ವಸಾಹತು ನೀತಿಯಾದ ಒಡೆದಾಳುವುದನ್ನು ತಿರಸ್ಕರಿಸಿದ್ದರು. ಜಿನ್ನಾರ ಎರಡು ರಾಷ್ಟ್ರ ಪರಿಕಲ್ಪನೆಗೆ ವಿರೋಧ ವ್ಯಕ್ತಪಡಿಸುವ ಮೂಲಕ, ಮುಸ್ಲಿಮರು ಏಕೀಕೃತ ಭಾರತಕ್ಕಾಗಿ ತಮ್ಮ ಬದ್ಧತೆ ಪ್ರದರ್ಶಿಸಿದ್ದರು ಎಂದು ಅವರು ಮುಸ್ಲಿಮರು ಸ್ವಾತಂತ್ರ್ಯ ಹೋರಾಟಕ್ಕಾಗಿ ನೀಡಿದ ಕೊಡುಗೆಗಳನ್ನು ಪಟ್ಟಿ ಮಾಡಿದರು.
ಭಾರತದ ಸಂವಿಧಾನವನ್ನು ದುರ್ಬಲಗೊಳಿಸುವ, ಭಾರತದಲ್ಲಿನ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಮರಿಗೆ ಕಳಂಕ ಹಚ್ಚುವ, ಭಾರತೀಯ ಸಮಾಜವನ್ನು ವಿಭಜಿಸುವ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಮತದಾನದ ಹಕ್ಕನ್ನು ಕಸಿದುಕೊಳ್ಳುವ ನಾಲ್ಕು ಮುಖ್ಯ ಉದ್ದೇಶಗಳನ್ನು ವಕ್ಫ್ ತಿದ್ದುಪಡಿ ಮಸೂದೆ ಒಳಗೊಂಡಿದೆ ಎಂದೂ ಅವರು ಆರೋಪಿಸಿದರು.