ಉದ್ಯಮಿ ದರ್ಶನ್ ಹಿರಾನಂದಾನಿ ‘ಅಫಿಡವಿಟ್’ ವಿರುದ್ಧ ಮಹುವಾ ಮೊಯಿತ್ರಾ ಕಿಡಿ
ಲೆಟರ್ಹೆಡ್ ಇಲ್ಲ, ಬೆದರಿಕೆ ತಂತ್ರ ಮೂಲಕ ಸಹಿಹಾಕಿಸಲಾಗಿದೆ ಎಂದು ಆರೋಪಿಸಿದ ತೃಣಮೂಲ ಸಂಸದೆ
ಮಹುವಾ ಮೊಯಿತ್ರಾ (PTI)
ಹೊಸದಿಲ್ಲಿ: ಉದ್ಯಮಿ ದರ್ಶನ್ ಹಿರಾನಂದನಿ ಅವರು ತಮ್ಮ ವಿರುದ್ಧ ಸಲ್ಲಿಸಿದ್ದಾರೆನ್ನಲಾದ ಅಫಿಡವಿಟ್ ವಿರುದ್ಧ ಕಿಡಿ ಕಾರಿರುವ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಈ ಕುರಿತಂತೆ ಎರಡು ಪುಟಗಳ ಹೇಳಿಕೆ ಹಾಗೂ ಐದು ಪ್ರಶ್ನೆಗಳನ್ನು ಕೇಳಿದ್ದಾರೆ. ಪ್ರಧಾನಿ ಕಾರ್ಯಾಲಯವು ಬೆದರಿಕೆ ತಂತ್ರಗಳ ಮೂಲಕ ಶ್ವೇತಪತ್ರಕ್ಕೆ ಸಹಿಹಾಕಿಸಿದೆ ಹಾಗೂ ನಂತರ ಅದನ್ನು ಮಾಧ್ಯಮಕ್ಕೆ ಸೋರಿಕೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
“ದರ್ಶನ್ ಹಿರಾನಂದಾನಿ ಅವರಿಗೆ ಸಿಬಿಐ ಅಥವಾ ನೈತಿಕತೆ ಸಮಿತಿ ಸಮನ್ಸ್ ಕಳುಹಿಸಿಲ್ಲ, ಅಥವಾ ಯಾವುದೇ ತನಿಖಾ ಏಜನ್ಸಿ ಇಂತಹ ಕ್ರಮಕೈಗೊಂಡಿಲ್ಲ. ಹಾಗಿದ್ದರೆ ಅವರು ಅಫಿಡವಿಟ್ ನೀಡಿದ್ದಾದರೂ ಯಾರಿಗೆ,” ಎಂದು ಟ್ವೀಟ್ ಮೂಲಕ ಮಹುವಾ ಪ್ರಶ್ನಿಸಿದ್ದಾರೆ.
ಈ ಅಫಿಡವಿಟ್ ಅಧಿಕೃತ ಲೆಟರ್ಹೆಡ್ನಲ್ಲಿಲ್ಲ ಅಥವಾ ನೋಟರಿ ಸಹಿಯಿಲ್ಲ ಅದನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಲ್ಲ ಬದಲು ಆಯ್ದ ಮಾಧ್ಯಮಕ್ಕೆ ಸೋರಿಕೆ ಮಾಡಲಾಗಿದೆ,” ಎಂದು ಅವರು ಆರೋಪಿಸಿದ್ಧಾರೆ.
“ಅದಾನಿಯನ್ನು ಪ್ರಶ್ನಿಸುವ ಧೈರ್ಯ ತೋರುವ ಪ್ರತಿ ರಾಜಕೀಯ ನಾಯಕರ ವಿರುದ್ಧ ದ್ವೇಷ ಸಾಧಿಸುವ ರೀತಿಯಿದು,” ಎಂದು ಅವರು ಹೇಳಿದ್ದಾರೆ.
ಮಹುವಾ ಅವರು ಪ್ರಧಾನಿ ಮೋದಿ ವಿರುದ್ಧ ಗುರಿ ಮಾಡಲು ಹಾಗೂ ಅವರ ಮಾನಹಾನಿಗೈಯ್ಯಲು ಅದಾನಿ ಸಮೂಹದ ವಿಚಾರ ಬಳಸಲು ತಮ್ಮ ಸಹಾಯ ಕೇಳಿದ್ದರು ಎಂದು ಹಿರಾನಂದಾನಿ ಅವರ ಅಫಿಡವಿಟ್ ಹೇಳಿದೆ.
ಗೌತಮ್ ಅದಾನಿ ವಿರುದ್ಧ ದಾಳಿ ನಡೆಸುವುದೇ ಪ್ರಧಾನಿ ಮೋದಿ ವಿರುದ್ಧ ದಾಳಿ ನಡೆಸಲು ಇರುವ ಏಕೈಕ ಮಾರ್ಗ ಎಂದು ಮಹುವಾ ನಂಬಿದ್ದರು ಮತ್ತು ಅದಕ್ಕೆ ಬೆಂಬಲ ನಿರೀಕ್ಷಿಸಿದ್ದರು ಎಂದು ಅಫಿಡವಿಟ್ನಲ್ಲಿ ತಿಳಿಸಲಾಗಿದೆ.
ಇದಕ್ಕಾಗಿ ತಾನು ಪ್ರಶ್ನೆ ರಚಿಸುವಂತಾಗಲು ಮಹುವಾ ತಮ್ಮ ಪಾರ್ಲಿಮೆಂಟ್ ಲಾಗಿನ್ ಐಡಿ ತಮಗೆ ನೀಡಿದ್ದರು ಎಂದೂ ಹಿರಾನಂದಾನಿ ಹೇಳಿಕೊಂಡಿದ್ದಾರೆ.
ಮಹುವಾ ಅವರು ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದಿದ್ದಾರೆ, ಅವರನ್ನು ತಕ್ಷಣ ಅಮಾನತುಗೊಳಿಸಬೇಕೆಂದು ಕೋರಿ ಕಳೆದ ವಾರ ಬಿಜೆಪಿ ಸಂಸದ ನಿಷಿಕಾಂತ್ ದುಬೆ ಅವರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದರು.