ದಿಲ್ಲಿ ಮುಂದಿನ ಸಿಎಂ ರೇಸ್ನಲ್ಲಿ ಸುನಿತಾ - ಅತಿಶಿ
Photo: PTI
ಹೊಸದಿಲ್ಲಿ: ಎರಡು ದಿನಗಳಲ್ಲಿ ದಿಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ ಬೆನ್ನಲ್ಲೇ ಅವರ ಉತ್ತರಾಧಿಕಾರಿ ಯಾರಾಗುತ್ತಾರೆ ಎನ್ನುವ ಬಗ್ಗೆ ವ್ಯಾಪಕ ವದಂತಿಗಳು ಹರಿದಾಡುತ್ತಿವೆ. ಕೇಜ್ರಿವಾಲ್ ಪತ್ನಿ ಸುನಿತಾ ಕೇಜ್ರಿವಾಲ್, ಸಚಿವರಾದ ಅತಿಶಿ ಹಾಗೂ ಗೋಪಾಲ್ ರಾಯ್ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ.
ದಿಲ್ಲಿ ಮದ್ಯ ನೀತಿ ಲಂಚ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಕೇಜ್ರಿವಾಲ್ ಈ ವಾರ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದರು. ಎಲ್ಲ ಶಾಸಕರ ಸಭೆ ಕರೆದು ಹೊಸ ನಾಯಕನನ್ನು ಆಯ್ಕೆ ಮಾಡಲಾಗುವುದು ಎಂದು ಕೇಜ್ರಿವಾಲ್ ಪ್ರಕಟಿಸಿದ್ದರು.
ಪಕ್ಷದ ಕಚೇರಿಯಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜೀನಾಮೆಯ ಅಚ್ಚರಿಯ ಹೇಳಿಕೆ ನೀಡಿದ್ದರು. ದಿಲ್ಲಿ ಪೊಲೀಸರು ಪ್ರಾಮಾಣಿಕತೆಯ ಪ್ರಮಾಣಪತ್ರ ನೀಡಿದ ಬಳಿಕವಷ್ಟೇ ಮತ್ತೆ ಸಿಎಂ ಆಗುವುದಾಗಿ ಘೋಷಿಸಿದ್ದರು.
ನಾನು ಪ್ರಾಮಾಣಿಕ ಎನಿಸಿದರೆ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಜನ ನನಗೆ ಮತಹಾಕಬೇಕು; ಇಲ್ಲದಿದ್ದರೆ ಬೇಡ ಎಂದು ಸ್ಪಷ್ಟಪಡಿಸಿದರು. ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಮ್ಮ ಉತ್ತರಾಧಿಕಾರಿಯಾಗಿ ಆಯ್ಕೆಯಾಗುವ ಸಾಧ್ಯತೆಯನ್ನು ಕೂಡಾ ಕೇಜ್ರಿವಾಲ್ ಅಲ್ಲಗಳೆದಿದ್ದರು. ದಿಲ್ಲಿ ಜನತೆ ಕ್ಲೀನ್ ಚಿಟ್ ನೀಡುವ ವರೆಗೆ ಅವರು ಕೂಡಾ ಸಿಎಂ ಹುದ್ದೆಗೆ ಏರುವುದಿಲ್ಲ ಎಂದು ಹೇಳಿದರು.