ಸಂಭಲ್ ಮಸೀದಿ ಪ್ರವೇಶದ ಹಕ್ಕಿಗಾಗಿ ಮನವಿ ಮಾಡಿಕೊಂಡ ಅರ್ಜಿಗೆ ನ್ಯಾಯಾಲಯವು ಕಟ್ಟಡದ ಸಮೀಕ್ಷೆಗೆ ಆದೇಶಿಸಿದ್ದೇಕೆ?: ಉವೈಸಿ ಪ್ರಶ್ನೆ

ಅಸದುದ್ದೀನ್ ಉವೈಸಿ (Photo: PTI)
ಉತ್ತರ ಪ್ರದೇಶ: ಸಂಭಲ್ ನಲ್ಲಿರುವ ಮೊಘಲರ ಕಾಲದ ಮಸೀದಿಗೆ ಸಂಬಂಧಿಸಿದ ಅರ್ಜಿಯಲ್ಲಿ ಪ್ರವೇಶದ ಹಕ್ಕಿಗಾಗಿ ಮನವಿ ಮಾಡಿಕೊಂಡರೆ, ಅಲ್ಲಿನ ನ್ಯಾಯಾಲಯವು ಕಟ್ಟಡದ ಸಮೀಕ್ಷೆಗೆ ಏಕೆ ಆದೇಶಿಸಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಪ್ರಶ್ನಿಸಿದ್ದಾರೆ.
ಸಂಭಲ್ ಘಟನೆ ಕುರಿತು ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಉವೈಸಿ, ನಾವು ಅರ್ಜಿಯನ್ನು ಓದಿದರೆ, ಅದರಲ್ಲಿ ಪ್ರವೇಶದ ಹಕ್ಕಿಗಾಗಿ ಮನವಿ ಮಾಡಿಕೊಂಡಿರುವುದು ಕಂಡುಕೊಂಡಿದ್ದೇವೆ, ಆದರೆ ನ್ಯಾಯಾಲಯವು ಏಕೆ ಸಮೀಕ್ಷೆಗೆ ಆದೇಶಿಸಿದೆ, ಅದು ತಪ್ಪು. ಅವರಿಗೆ ಪ್ರವೇಶ ಬೇಕು, ಮಸೀದಿಗೆ ಹೋಗುವುದನ್ನು ಮತ್ತು ಕುಳಿತುಕೊಳ್ಳುವುದನ್ನು ಯಾರು ತಡೆಯುತ್ತಾರೆ? ಹಣದುಬ್ಬರ, ನಿರುದ್ಯೋಗ, ರೈತರ ಆತ್ಮಹತ್ಯೆ ಮತ್ತಿತರ ಸಮಸ್ಯೆಗಳನ್ನು ಎದುರಿಸುತ್ತಿರುವ ದೇಶವನ್ನು ಇಂತಹ ಸಮಸ್ಯೆಗಳು ಮತ್ತಷ್ಟು ದುರ್ಬಲಗೊಳಿಸುತ್ತವೆ ಎಂದು ಬಿಜೆಪಿಯನ್ನು ಗುರಿಯಾಗಿಸಿ ಉವೈಸಿ ಹೇಳಿದ್ದಾರೆ.
ಆರಾಧನಾ ಸ್ಥಳಗಳ ಕಾಯಿದೆಯ ಪ್ರಕಾರ, ಧಾರ್ಮಿಕ ಸ್ಥಳದ ಸ್ವರೂಪ ಬದಲಾಯಿಸಲು ಸಾಧ್ಯವಿಲ್ಲ ಎಂದಾದರೆ ಇನ್ನೂ ಏಕೆ ಸಮೀಕ್ಷೆಗೆ ಆದೇಶಿಸಲಾಗಿದೆ? ಎಂದು ಹೈದರಾಬಾದ್ ಸಂಸದರು ಪ್ರಶ್ನಿಸಿದ್ದಾರೆ.
ಅಜ್ಮೀರ್ ದರ್ಗಾ ಕುರಿತ ವಿವಾದಕ್ಕೆ ಪ್ರತಿಕ್ರಿಯಿಸಿದ ಉವೈಸಿ, ದರ್ಗಾ 800 ವರ್ಷಗಳಿಂದ ಅಸ್ತಿತ್ವದಲ್ಲಿದೆ ಮತ್ತು ಸೂಫಿ ಕವಿ ಅಮೀರ್ ಖುಸ್ರೋ ಅವರು ತಮ್ಮ ಪುಸ್ತಕದಲ್ಲಿ ದರ್ಗಾದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈಗ ಅದು ದರ್ಗಾ ಅಲ್ಲ ಎನ್ನುತ್ತಿದ್ದಾರೆ, ಹೀಗಾದರೆ ಇದು ಎಲ್ಲಿ ನಿಲ್ಲುತ್ತದೆ? ಪ್ರಧಾನಿಗಳು ಕೂಡ ಈ ದರ್ಗಾಕ್ಕೆ ‘ಉರೂಸ್’ ಸಮಯದಲ್ಲಿ ‘ಚಾದರ್’ ಕಳುಹಿಸುತ್ತಾರೆ ಎಂದು ಹೇಳಿದ್ದಾರೆ.