ತನ್ನ ಹೇಳಿಕೆ ದಾಖಲಿಸಿಕೊಳ್ಳಲು ಇನ್ನೂ ಏಕೆ ಕರೆದಿಲ್ಲ?: ಮಹುವಾ ಪ್ರಕರಣ ಉಲ್ಲೇಖಿಸಿ ಸ್ಪೀಕರ್ಗೆ ಪತ್ರ ಬರೆದ ಸಂಸದ ದಾನಿಶ್ ಅಲಿ
Photo- PTI
ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಲು ನಗದು ಮತ್ತು ಉಡುಗೊರೆಗಳನ್ನು ಉದ್ಯಮಿಯೊಬ್ಬರಿಂದ ಪಡೆದಿದ್ದಾರೆಂದು ಆರೋಪಿಸಿ ಬಿಜೆಪಿ ಸಂಸದ ನಿಷಿಕಾಂತ್ ದುಬೆ ಅವರು ಸ್ಪೀಕರ್ಗೆ ಸಲ್ಲಿಸಿದ ದೂರಿನ ನಂತರ ಈ ಪ್ರಕರಣದಲ್ಲಿ ತನಿಖೆಗೆ ನೈತಿಕತೆ ಸಮಿತಿ ಮುಂದಾಗಿರುವುದುದರಿಂದ ಲೋಕಸಭೆಯ ಸವಲತ್ತುಗಳ ಸಮಿತಿ ಮುಂದೆ ತಾವು ಬಿಜೆಪಿ ಸಂಸದ ರಮೇಶ್ ಬಿಧೂರಿ ವಿರುದ್ಧ ಮಾಡಿರುವ ದೂರು ಇನ್ನು ಬಾಕಿಯಿರುವ ಕುರಿತಂತೆ ಬಿಎಸ್ಪಿ ಸಂಸದ ದಾನಿಶ್ ಅಲಿ ಪ್ರಶ್ನಿಸಿದ್ದಾರೆ.
ತಮ್ಮ ಪ್ರಕರಣದಲ್ಲಿ ಬಿಧೂರಿ ಅವರು ಸವಲತ್ತುಗಳ ಸಮಿತಿ ಮುಂದೆ ಹಾಜರಾಗಿದ್ದರೂ ತಮಗೆ ಇನ್ನೂ ವಿಚಾರಣೆಗೆ ಕರೆದಿಲ್ಲದೇ ಇರುವ ಕುರಿತಂತೆ ಅಲಿ ಅವರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು ಮಹುವಾ ಪ್ರಕರಣ ಉಲ್ಲೇಖಿಸಿದ್ದಾರೆ.
ಸೆಪ್ಟೆಂಬರ್ 22 ರಂದು ಬಿಧೂರಿ ತನ್ನ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದಾರೆಂದು ದೂರಿರುವುದನ್ನು ಉಲ್ಲೇಖಿಸಿದ ಅಲಿ, ನಿಯಮದ ಪ್ರಕಾರ ಸವಲತ್ತುಗಳ ಸಮಿತಿ ಮುಂದೆ ದೂರುದಾರ ಸದಸ್ಯರನ್ನು ಮೊದಲು ಕರೆದು ನಂತರ ಆರೋಪಿತ ವ್ಯಕ್ತಿಯನ್ನು ಕರೆಯಬೇಕು, ಆದರೆ ತಮ್ಮ ಪ್ರಕರಣದಲ್ಲಿ ಆರೋಪಿತ ವ್ಯಕ್ತಿಯನ್ನು ಮೊದಲು ಕರೆಯಲಾಗಿದ್ದರೆ ನೈತಿಕತೆ ಸಮಿತಿ ಮಹುವಾ ಪ್ರಕರಣದಲ್ಲಿ ನಿಯಮ ಪಾಲಿಸಿ ಮೊದಲು ದೂರುದಾರರನ್ನು ಕರೆದಿದೆ. ಈ ಹಿನ್ನೆಲೆಯಲ್ಲಿ ಬೇರೊಂದು ಪ್ರಕರಣದಲ್ಲಿ ದೂರುದಾರನಾಗಿರುವ ನನ್ನನ್ನು ಸಾಕ್ಷ್ಯ ಒದಗಿಸಲು ಕರೆಯುವಂತೆ ಕ್ರಮಕೈಗೊಳ್ಳಬೇಕು ಎಂದು ಅಲಿ ಅವರು ಸ್ಪೀಕರ್ಗೆ ಬರೆದ ಪತ್ರದಲ್ಲಿ ಕೋರಿದ್ದಾರೆ.