ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಚುನಾವಣಾ ಬಾಂಡ್ ಗಳ ಕುರಿತು ಈಡಿ ತನಿಖೆ ನಡೆಸುತ್ತಿಲ್ಲ ಯಾಕೆ?: ಸೀತಾರಾಮ್ ಯೆಚೂರಿ ಪ್ರಶ್ನೆ
ಸೀತಾರಾಮ್ ಯೆಚೂರಿ (PTI)
ಹೊಸದಿಲ್ಲಿ: ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ತನಿಖೆ ನಡೆಸಲು ಜಾರಿ ನಿರ್ದೇಶನಾಲಯವೇಕೆ ಅಕ್ರಮ ಹಣ ವರ್ಗಾವಣೆ ಕಾಯ್ದೆಯನ್ನು ಬಳಸುತ್ತಿಲ್ಲ ಎಂದು ಭಾರತೀಯ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ)ದ ನಾಯಕ ಸೀತಾರಾಮ್ ಯೆಚೂರಿ ಪ್ರಶ್ನಿಸಿದ್ದಾರೆ.
‘The Hindu’ ದಿನಪತ್ರಿಕೆಗೆ ಸಂದರ್ಶನ ನೀಡಿರುವ ಸೀತಾರಾಮ್ ಯೆಚೂರಿ, “ಚುನಾವಣಾ ಬಾಂಡ್ ಗಳಲ್ಲಿ ಸ್ಪಷ್ಟವಾಗಿ ಅಕ್ರಮ ಹಣ ವರ್ಗಾವಣೆ ಪ್ರಕರಣಗಳು ದೊರೆಯುತ್ತವೆ” ಎಂದು ಹೇಳಿದ್ದಾರೆ. “ಅಲ್ಲಿ ಹಲವಾರು ಸಂಸ್ಥೆಗಳು ತಮ್ಮ ಲಾಭವನ್ನೂ ಮೀರಿ ಚುನಾವಣಾ ಬಾಂಡ್ ಗಳನ್ನು ಖರೀದಿಸಿರುವುದು ನಡೆದಿದೆ. ಹಲವಾರು ಸಂಸ್ಥೆಗಳು ನಷ್ಟದ ಹೊರತಾಗಿಯೂ ಚುನಾವಣಾ ಬಾಂಡ್ ಗಳನ್ನು ಖರೀದಿಸಿವೆ. ಅವು ಈ ಹಣವನ್ನು ಎಲ್ಲಿಂದ ತಂದವು? ಇದು ಸ್ಪಷ್ಟವಾಗಿ ಮತ್ತು ತೆರೆದ ಅಕ್ರಮ ಹಣ ವರ್ಗಾವಣೆ ಪ್ರಕರಣವಲ್ಲವೆ?” ಎಂದೂ ಅವರು ಪ್ರಶ್ನಿಸಿದ್ದಾರೆ.
ಫೆಬ್ರವರಿ 15ರಂದು ಚುನಾವಣಾ ಬಾಂಡ್ ಯೋಜನೆಯನ್ನು ಅಸಾಂವಿಧಾನಿಕ ಎಂದು ಘೋಷಿಸಿದ್ದ ಸುಪ್ರೀಂ ಕೋರ್ಟ್, ಆ ಯೋಜನೆಯನ್ನು ರದ್ದುಗೊಳಿಸಿತ್ತು.