ನನ್ನ ಮತ್ತು ಬಿಜೆಪಿ ಸಂಸದ ಬಿಧೂರಿ ಬಗ್ಗೆ ವಿಭಿನ್ನ ನಿಲುವುಗಳನ್ನು ತಳೆದಿರುವುದು ಏಕೆ?: ಸಂಸದೀಯ ಸಮಿತಿಗೆ ಪತ್ರ ಬರೆದ ಮಹುವಾ ಮೊಯಿತ್ರಾ
ಮಹುವಾ ಮೊಯಿತ್ರಾ (PTI)
ಹೊಸದಿಲ್ಲಿ: ವಿಚಾರಣೆಗೆ ಕರೆಸುವುದಕ್ಕೆ ಸಂಬಂಧಿಸಿದಂತೆ ತನ್ನ ಮತ್ತು ಬಿಜೆಪಿ ಸಂಸದ ರಮೇಶ ಬಿಧೂರಿ ಬಗ್ಗೆ ವಿಭಿನ್ನ ನಿಲುವುಗಳನ್ನು ತಳೆದಿರುವುದು ಏಕೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಲೋಕಸಭೆಯ ನೀತಿ ಸಮಿತಿಯ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ವಿನೋದ್ ಕುಮಾರ್ ಶೋನ್ಕರ್ ಅವರಿಗೆ ಬರೆದಿರುವ ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ಬಿಧುರಿ ಅಕ್ಟೋಬರ್ನಲ್ಲಿ ಲೋಕಸಭೆಯಲ್ಲಿ ಬಿಎಸ್ಪಿ ಸಂಸದ ದಾನಿಷ್ ಅಲಿ ವಿರುದ್ಧ ಮುಸ್ಲಿಮ್ ವಿರೋಧಿ ದ್ವೇಷಭಾಷಣವನ್ನು ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಂಸದೀಯ ಸಮಿತಿಯ ಸಭೆಯನ್ನು ಬಿಧುರಿ ಪೂರ್ವ ನಿಗದಿತ ಕಾರ್ಯಕ್ರಮಗಳ ನೆಪವನ್ನೊಡ್ಡಿ ತಪ್ಪಿಸಿಕೊಂಡಿದ್ದರು.
ಅ.26ರಂದು ನೀತಿ ಸಮಿತಿಯ ಅಧ್ಯಕ್ಷರು,ಬಿಜೆಪಿ ಸಂಸದ ನಿಶಿಕಾಂತ ದುಬೆ ಅವರು ಮಾಡಿರುವ ‘ಪ್ರಶ್ನೆಗಳಿಗಾಗಿ ಲಂಚ’ ಆರೋಪಕ್ಕೆ ಸಂಬಂಧಿಸಿದಂತೆ ಮೊಯಿತ್ರಾರನ್ನು ಸಮಿತಿಯ ಮುಂದೆ ಕರೆಸಲು ನಿರ್ಧರಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದ ಬೆನ್ನಲ್ಲೇ ಮೊಯಿತ್ರಾ ನ.5ರವರೆಗೆ ಸಮಯಾವಕಾಶವನ್ನು ಕೋರಿ ಶೋನ್ಕರ್ಗೆ ಪತ್ರವನ್ನು ಬರೆದಿದ್ದರು.
ವಾರ್ಷಿಕ ದುರ್ಗಾ ಪೂಜೆಯಿಂದಾಗಿ ತನ್ನ ಮತಕ್ಷೇತ್ರದಲ್ಲಿಯ ಪೂರ್ವ ನಿಗದಿತ ಕಾರ್ಯಕ್ರಮಗಳ ಬಗ್ಗೆ ಅವರು ಪತ್ರದಲ್ಲಿ ತಿಳಿಸಿದ್ದರು. ಆದರೆ ಮೊಯಿತ್ರಾರ ಕೋರಿಕೆಯನ್ನು ತಳ್ಳಿಹಾಕಿದ್ದ ಶೋನ್ಕರ್,ನ.2ರಂದು ನೀತಿ ಸಮಿತಿಯ ಮುಂದೆ ಹಾಜರಾಗುವಂತೆ ಸೂಚಿಸಿದ್ದರು.
ತನ್ನ ಮತ್ತು ಬಿಧುರಿ ಕುರಿತು ಸಮಿತಿಯ ದ್ವಂದ್ವ ನಿಲುವನ್ನು ಅ.31ರಂದು ಬರೆದಿರುವ ಪತ್ರದಲ್ಲಿ ಎತ್ತಿ ತೋರಿಸಿರುವ ಮೊಯಿತ್ರಾ,ಸದನದಲ್ಲಿ ಬಹಿರಂಗವಾಗಿ ದ್ವೇಷ ಭಾಷಣವನ್ನು ಮಾಡಿದ ಗಂಭೀರ ಆರೋಪವನ್ನು ಹೊತ್ತಿರುವ ಬಿಧುರಿ ಪ್ರಕರಣದಲ್ಲಿ ಸಂಪೂರ್ಣ ಭಿನ್ನವಾದ ನಿಲುವನ್ನು ತಳೆಯಲಾಗಿದೆ. ಪೂರ್ವ ನಿಗದಿತ ಕಾರ್ಯಕ್ರಮಗಳ ನೆಪವನ್ನೊಡ್ಡಿ ಅವರು ಅ.10ರಂದು ಸಮಿತಿಯ ಮುಂದೆ ಗೈರುಹಾಜರಾಗಿದ್ದರು. ಅವರ ವಿಚಾರಣೆಗೆ ಮುಂದಿನ ದಿನಾಂಕವನ್ನು ಈವರೆಗೆ ನೀಡಲಾಗಿಲ್ಲ. ಈ ಇಬ್ಬಗೆ ನಿಲುವುಗಳು ರಾಜಕೀಯ ಉದ್ದೇಶಗಳಿಂದ ಕೂಡಿವೆ ಮತ್ತು ನೀತಿಸಮಿತಿಯ ವಿಶ್ವಾಸಾರ್ಹತೆವನ್ನು ಹೆಚ್ಚಿಸಲು ನೆರವಾಗುವುದಿಲ್ಲ ಎಂದು ಹೇಳಿದ್ದಾರೆ.
ಮೊಯಿತ್ರಾ ನೀತಿ ಸಮಿತಿಗೆ ಬರೆದಿರುವ ಪತ್ರವನ್ನು ಬುಧವಾರ ಎಕ್ಸ್ನಲ್ಲಿ ಬಹಿರಂಗಗೊಳಿಸಿದ್ದಾರೆ.