ಚುನಾವಣಾ ಬಾಂಡ್ ವಿಚಾರದಲ್ಲಿ ಪ್ರಧಾನಿ ಯಾಕೆ ಹೆದರಿಕೊಂಡಿದ್ದಾರೆ?: ಕಾಂಗ್ರೆಸ್ ಪ್ರಶ್ನೆ
ನರೇಂದ್ರ ಮೋದಿ , ಜೈರಾಮ್ ರಮೇಶ್ | Photo: PTI
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬುಧವಾರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಭಾರತೀಯ ಸ್ಟೇಟ್ ಬ್ಯಾಂಕ್ ಮೂಲಕ ಅವರ ಸರಕಾರವು ನಿರಂತರವಾಗಿ ಯಾವ ಯಾವ ರಾಜಕೀಯ ಪಕ್ಷಗಳಿಗೆ ಎಷ್ಟು ದೇಣಿಗೆ ದೊರೆತಿದೆ ಎಂಬ ವಿವರಗಳನ್ನು ಒದಗಿಸಲು ತಡೆ ಹಾಕುತ್ತಿದೆ ಇಲ್ಲವೆ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಜೈರಾಮ್ ರಮೇಶ್, ಪ್ರಧಾನಿಗಳೆದುರು ಕೆಲವು ಪ್ರಶ್ನೆಗಳನ್ನಿಟ್ಟಿದ್ದು, ಅವರು ತಮ್ಮ ಸರಕಾರದ ಕೆಲವು ಮೂಲಭೂತ ಜವಾಬ್ದಾರಿಗಳ ಬಗ್ಗೆ ಉತ್ತರಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.
ಪ್ರಧಾನಿಗಳು ಯಾವುದರ ಕುರಿತು ಇಷ್ಟು ಹೆದರಿಕೊಂಡಿದ್ದಾರೆ ಹಾಗೂ ಚುನಾವಣಾ ಬಾಂಡ್ ಬಹಿರಂಗದಲ್ಲಿ ಯಾವ ಹೊಸ ಹಗರಣ ಅಡಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.
“ಫೆಬ್ರವರಿ 20, 2024ರಂದು ತಮ್ಮ ಮೇಲೆ ಈಡಿ, ಸಿಬಿಐ ಅಥವಾ ಆದಾಯ ತೆರಿಗೆ ಇಲಾಖೆಗಳು ದಾಳಿ ನಡೆದ ಬೆನ್ನಿಗೇ ಕೆಲವು ಸಂಸ್ಥೆಗಳು ಬಿಜೆಪಿಗೆ ರೂ. 335 ಕೋಟಿಯ ಬೃಹತ್ ಮೊತ್ತವನ್ನು ದೇಣಿಗೆ ನೀಡಿದ್ದವು ಎಂಬ ಸಂಗತಿ ಬಹಿರಂಗವಾಗಿತ್ತು. ತಮ್ಮ ಮೇಲೆ ದಾಳಿ ನಡೆದ ಕೂಡಲೇ ಈ ಸಂಸ್ಥೆಗಳು ಏಕೆ ಬಿಜೆಪಿಗೆ ದೇಣಿಗೆ ನೀಡಿದವು” ಎಂದೂ ಅವರು ಪ್ರಶ್ನಿಸಿದ್ದಾರೆ.
ಬಿಜೆಪಿಯೇನಾದರೂ ಈಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ತನಿಖೆಗೆ ಬಳಸಿಕೊಂಡು ಈ ಸಂಸ್ಥೆಗಳಿಂದ ಹಣದ ಸುಲಿಗೆಗೆ ಬೆದರಿಕೆ ಒಡ್ಡಿದೆಯೆ ಎಂದೂ ಅವರು ಪ್ರಶ್ನಿಸಿದ್ದಾರೆ.