ಎರಡು ವರ್ಷದಿಂದ ತನಿಖೆ ನಡೆಯುತ್ತಿದ್ದರೂ, ಚುನಾವಣೆಗೂ ಮುನ್ನವೇ ಏಕೆ ಸಮನ್ಸ್?: ಬಿಜೆಪಿ ವಿರುದ್ಧ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ
ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (PTI)
ಹೊಸದಿಲ್ಲಿ: ಇಂದು ಜಾರಿ ನಿರ್ದೇಶನಾಲಯವು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರನ್ನು ಬಂಧಿಸುತ್ತದೆ ಎಂದು ಅವರ ಪಕ್ಷವು ಪ್ರತಿಪಾದಿಸುತ್ತಿರುವ ಬೆನ್ನಿಗೇ, ಲೋಕಸಭಾ ಚುನಾವಣೆಯಲ್ಲಿ ನಾನು ಪ್ರಚಾರ ಮಾಡಕೂಡದು ಎಂಬ ಕಾರಣಕ್ಕಾಗಿಯೇ ನನಗೆ ಸಮನ್ಸ್ ಜಾರಿಗೊಳಿಸಲಾಗಿದೆ ಎಂದು ಆಪ್ ಪಕ್ಷದ ಮುಖ್ಯಸ್ಥರೂ ಆಗಿರುವ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ದಿಲ್ಲಿ ಅಬಕಾರಿ ನೀತಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಪ್ರತಿಪಾದಿಸಿರುವ ಅವರು, ಬಿಜೆಪಿ ನನ್ನನ್ನು ಬಂಧಿಸಲು ಪ್ರಯತ್ನಿಸುತ್ತಿದೆ ಎಂಬ ಪಕ್ಷದ ಪ್ರತಿಪಾದನೆಯನ್ನು ಪುನರುಚ್ಚರಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
“ನೀವು ಕಳೆದ ಎರಡು ವರ್ಷಗಳಿಂದ ಹಲವಾರು ಬಾರಿ ದಿಲ್ಲಿ ಅಬಕಾರಿ ನೀತಿ ಹಗರಣದ ಕುರಿತು ಕೇಳಿರಬಹುದು. ಈ ಎರಡು ವರ್ಷಗಳಲ್ಲಿ ಎಲ್ಲ ಬಿಜೆಪಿ ತನಿಖಾ ಸಂಸ್ಥೆಗಳು ಹಲವಾರು ದಾಳಿಗಳನ್ನು ನಡೆಸಿವೆ ಹಾಗೂ ಹಲವು ಮಂದಿಯನ್ನು ಬಂಧಿಸಿವೆ. ಹೀಗಿದ್ದೂ ಅವರು ಒಂದು ಪೈಸೆಯಷ್ಟೂ ಭ್ರಷ್ಟಾಚಾರವನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಒಂದು ವೇಳೆ ಭ್ರಷ್ಟಾಚಾರವಾಗಿದ್ದರೆ, ಆ ಎಲ್ಲ ಕೋಟಿ ರೂಪಾಯಿಗಳು ಎಲ್ಲಿಗೆ ಹೋದವು?” ಎಂದು ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ದಿಲ್ಲಿ ಅಬಕಾರಿ ನೀತಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಒತ್ತಿ ಹೇಳಿರುವ ಕೇಜ್ರಿವಾಲ್, ಒಂದು ವೇಳೆ ಅದಲ್ಲದೆ ಹೋಗಿದ್ದರೆ, ಆ ಹಣ ಪತ್ತೆಯಾಗಿರುತ್ತಿತ್ತು ಎಂಬುದರತ್ತ ಅವರು ಬೊಟ್ಟು ಮಾಡಿದ್ದಾರೆ.