ಲೋಕಸಭಾ ಚುನಾವಣೆಗೆ ಇನ್ನೇನು ಕೆಲ ದಿನಗಳಿರುವಾಗ ಕೇಜ್ರಿವಾಲ್ ರನ್ನು ಏಕೆ ಬಂಧಿಸಲಾಯಿತು?: ಈಡಿಯನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್
ಅರವಿಂದ್ ಕೇಜ್ರಿವಾಲ್ , ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಲೋಕಸಭಾ ಚುನಾವಣೆಗಳಿಗೆ ಇನ್ನೇನು ಕೆಲ ದಿನಗಳಿರುವಾಗ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನೇಕೆ ಬಂಧಿಸಲಾಯಿತು ಎಂದು ಸುಪ್ರೀಂ ಕೋರ್ಟ್ ಇಂದು ಜಾರಿ ನಿರ್ದೇಶನಾಲಯವನ್ನು ಪ್ರಶ್ನಿಸಿದೆ.
ದಿಲ್ಲಿ ಅಬಕಾರಿ ನೀತಿ ಪ್ರಕರಣ ಸಂಬಂಧ ತಮ್ಮ ಬಂಧನ ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ.
“ಈ ಪ್ರಕರಣದಲ್ಲಿ ಇಲ್ಲಿಯ ತನಕ ಏನನ್ನೂ ವಶಪಡಿಸಿಕೊಳ್ಳಲಾಗಿಲ್ಲ, ಹಾಗೇನಾದರೂ ಮಾಡಲಾಗಿದ್ದರೆ ಕೇಜ್ರಿವಾಲ್ ಈ ಪ್ರಕರಣದಲ್ಲಿ ಹೇಗೆ ಶಾಮೀಲಾಗಿದ್ದಾರೆಂದು ತೋರಿಸಿ. ಹೇಳಿ ಲೋಕಸಭಾ ಚುನಾವಣೆಗೆ ಮುಂಚೆ ಏಕೆ ಬಂಧನ?” ಎಂದು ಜಸ್ಟಿಸ್ ಸಂಜೀವ್ ಖನ್ನಾ ಅವರು ಇಡಿಯನ್ನು ಪ್ರಶ್ನಿಸಿದರು.
ಇದೇ ಪ್ರಕರಣದಲ್ಲಿ ಬಂಧಿತರಾಗಿರುವ ದಿಲ್ಲಿಯ ಮಾಜಿ ಡೆಪ್ಯುಟಿ ಸಿಎಂ ಮನೀಶ್ ಸಿಸೋಡಿಯಾ ಅವರ ವಿಚಾರದಲ್ಲಿ ಸಾಕ್ಷ್ಯಗಳು ದೊರಕಿವೆ ಎಂದು ಈಡಿ ಹೇಳಿದೆ ಆದರೆ ಕೇಜ್ರಿವಾಲ್ ವಿಚಾರದಲ್ಲಿ ಹಾಗಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.