ಉತ್ತರಾಖಂಡದಲ್ಲಿ ವ್ಯಾಪಕ ಮಳೆ; ಅಪಾಯದ ಮಟ್ಟ ಮೀರಿದ ಗಂಗೆ
Photo: Times of India (ಸಾಂದರ್ಭಿಕ ಚಿತ್ರ)
ಡೆಹ್ರಾಡೂನ್: ಉತ್ತರಾಖಂಡದ ಹಲವು ಕಡೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭೂಕುಸಿತದಿಂದಾಗಿ ಹಲವು ರಸ್ತೆಗಳು ಮುಚ್ಚಲ್ಪಟ್ಟಿವೆ ಎಮದು ವರದಿಯಾಗಿದೆ.
ದೇವಪ್ರಯಾಗದಲ್ಲಿ ಗಂಗಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಅಲಕಾನಂದ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟಿನಿಂದ ಹೆಚ್ಚುವರಿ ನೀರು ಬಿಡುಗಡೆ ಮಾಡಿದ ಕಾರಣದಿಂದ ಹರಿದ್ವಾರದಲ್ಲೂ ಮುನ್ನೆಚ್ಚರಿಕೆ ನೀಡಲಾಗಿದೆ.
ಗಂಗಾನದಿ ನೀರಿನ ಮಟ್ಟ 463.20 ಮೀಟರ್ಗಳಾಗಿದ್ದು, ಸಂಗಮ್ ಘಾಟ್, ರಾಮಕುಂಡ, ಧಾನೇಶ್ವರ ಘಾಟ್ ಮತ್ತು ಫಲೂಡಿ ಘಾಟ್ಗಳು ಮುಳುಗಿವೆ. ಅಲಕಾನಂದ ನದಿಯ ಜಿವಿಕೆ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನಿಂದ 2 ಸಾವಿರದಿಂದ 3 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಹಲವೆಡೆ ಗಂಗಾನದಿ ನೀರಿನ ಮಟ್ಟ ಹೆಚ್ಚಿದೆ.
ನದಿದಂಡೆಯಲ್ಲಿರುವ ಜನತೆಗೆ ಜಿಲ್ಲಾಡಳಿತ ಎಚ್ಚರಿಕೆ ಸಂದೇಶ ನೀಡಿದೆ ಎಂದು ತೆಹ್ರಿ ಜಿಲ್ಲಾ ವಿಕೋಪ ನಿರ್ವಹಣೆ ಅಧಿಕಾರಿ ಬ್ರಿಜೇಶ್ ಭಟ್ ಹೇಳಿದ್ದಾರೆ. ಹೃಷಿಕೇಶ ಸಮೀಪದ ತೆಹ್ರಿಯ ಮುನಿ ಕಿ ರೇತಿ ಪ್ರದೇಶದಲ್ಲಿ ಗಂಗಾನದಿಯ ನೀರಿನ ಮಟ್ಟ 339.60 ಮೀಟರ್ ಆಗಿದ್ದು, ಇದು ಅಪಾಯದ ಮಟ್ಟದಿಂದ 0.10 ಮೀಟರ್ ಅಧಿಕ ಎಂದು ಅವರು ವಿವರಿಸಿದ್ದಾರೆ.
ಭಾನುವಾರ ಸಂಜೆ ವೇಳೆಗೆ ಹರಿದ್ವಾರದಲ್ಲೂ ಗಂಗಾನದಿ ನೀರಿನಮಟ್ಟ 293.15 ಮೀಟರ್ ಇದ್ದು, ಇದು ಕೂಡಾ ಅಪಾಯದ ಮಟ್ಟ (293 ಮೀಟರ್)ಕ್ಕಿಂತ ಅಧಿಕ ಎಂದು ಅಧಿಕಾರಿಗಳು ಹೇಳಿದ್ದಾರೆ. ತಗ್ಗು ಪ್ರದೇಶದ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.
ಧಾರಾಕಾರ ಮಳೆಯಿಂದಾಗಿ ಲಕ್ಸರ್, ಖಾನ್ಪುರ, ರೂರ್ಕಿ, ಭಗವಾನ್ ಪುರ ಮತ್ತು ಹರಿದ್ವಾರ ತಾಲೂಕುಗಳ 71ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಗಿರ್ತಿಗಂಗಾ ನದಿಯಲ್ಲಿ ಪ್ರವಾಹದಿಂದಾಗಿ ಜೋಶಿಮಠ- ಮಲಾರಿ ರಸ್ತೆಯ ಸೇತುವೆ ಹಾನಿಗೀಡಾಗಿದೆ. ರಾಜ್ಯದ 13 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.