ಪತ್ನಿ, ಇಬ್ಬರು ಪುತ್ರರು, ಪುತ್ರಿಯ ಹತ್ಯೆ; ಗಂಟೆಗಳ ಬಳಿಕ ಪತಿಯ ಮೃತದೇಹ ಪತ್ತೆ!
PC: x.com/ndtv
ವಾರಾಣಾಸಿ: ಉತ್ತರ ಪ್ರದೇಶದ ವಾರಾಣಾಸಿಯಲ್ಲಿ ಮಂಗಳವಾರ ಗುಂಡಿನಿಂದ ಜರ್ಜರಿತವಾಗಿದ್ದ 45 ವರ್ಷದ ಮಹಿಳೆ, 25, 17 ಮತ್ತು 15 ವರ್ಷ ವಯಸ್ಸಿನ ಮೂವರು ಮಕ್ಕಳ ಶವ ಅವರ ಮನೆಯಲ್ಲಿ ಪತ್ತೆಯಾಗಿದೆ. ಮಹಿಳೆಯ ಪತಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಪತಿ ಈ ಕೃತ್ಯ ಎಸಗಿ ತಲೆ ಮರೆಸಿಕೊಂಡಿರಬೇಕು ಎಂದು ಪೊಲೀಸರು ಶಂಕಿಸಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಪತಿಯ ಮೃತದೇಹ ನಿರ್ಮಾಣ ಹಂತದ ಕಟ್ಟಡವೊಂದರ ಬಳಿ ಪತ್ತೆಯಾಗಿದ್ದು, ಅವರ ದೇಹದ ಮೇಲೂ ಗುಂಡು ತಗುಲಿದ ಗುರುತುಗಳಿವೆ. ಈ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಪೊಲೀಸರು ಅಂದಾಜಿಸಿದ್ದಾರೆ.
ವಾರಾಣಾಸಿಯ ಭಂದಾಯಿನಿ ಪ್ರದೇಶದಲ್ಲಿ ಮಂಗಳವಾರ ಮುಂಜಾನೆಯೇ ಈ ದಾರುಣ ಘಟನೆ ಸಾರ್ವಜನಿಕರಲ್ಲಿ ಭೀತಿಗೆ ಕಾರಣವಾಗಿತ್ತು. ರಾಜೇಂದ್ರ ಗುಪ್ತಾ ಎಂಬವರ ಮನೆಯಲ್ಲಿ 20ಕ್ಕೂ ಹೆಚ್ಚು ಕುಟುಂಬಗಳು ಬಾಡಿಗೆಗೆ ಇದ್ದವು. ಈ ಮನೆಯ ಬಾಗಿಲು ಮುಚ್ಚಿಯೇ ಇತ್ತು. ಸಹಾಯಕಿ ಮನೆಗೆ ಬಂದಾಗ ನೀತು (45), ನವನೇಂದ್ರ (25), ಗೌರಂಗಿ (16) ಮತ್ತು ಶುಭನೇಂದ್ರ ಗುಪ್ತಾ (15) ಎಂಬವರ ಮೃತದೇಹ ಕಂಡುಬಂತು. ರಾಜೇಂದ್ರ ನಾಪತ್ತೆಯಾಗಿದ್ದರು. ಕೆಲ ಗಂಟೆಗಳ ಬಳಿಕ ಅವರ ಮೃತದೇಹವೂ ಪತ್ತೆಯಾಗಿತು. ಕುಟುಂಬ ಸದಸ್ಯರೆಲ್ಲರನ್ನೂ ಹತ್ಯೆ ಮಾಡಿದ ಬಳಿಕ ಮನೆಯ ಯಜಮಾನನಾದ ರಾಜೇಂದ್ರ ಗುಪ್ತಾ ತಾನೂ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.
ಕೌಟುಂಬಿಕ ಕಲಹ ಈ ಹತ್ಯೆಗೆ ಕಾರಣ ಎಂದು ಹಿರಿಯ ಮಹಿಳೆಯೊಬ್ಬರು ಹೇಳಿದ್ದಾಗಿ ಹಿರಿಯ ಪೊಲೀಸ್ ಅಧಿಕಾರಿ ಗೌರವ್ ಬನ್ಸಾಲ್ ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ಕೂಡಾ ಹಲವು ಹತ್ಯೆ ಪ್ರಕರಣಗಳಲ್ಲಿ ರಾಜೇಂದ್ರ ಗುಪ್ತಾ ವಿರುದ್ಧ ಆರೋಪ ಕೇಳಿಬಂದಿತ್ತು. ಸದ್ಯಕ್ಕೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಈ ಹತ್ಯೆಗೆ ಪಿಸ್ತೂಲ್ ಬಳಸಲಾಗಿದೆ ಮತ್ತು ಹತ್ಯೆಯಾದ ಎಲ್ಲರೂ ನಿದ್ದೆಯಲ್ಲಿದ್ದಿರಬೇಕು ಎಂದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಗುಂಡಿನ ಕೇಸ್ ಗಳು ಪತ್ತೆಯಾಗಿವೆ. ಈ ಪ್ರಕರಣಕ್ಕೆ ಆಸ್ತಿ ವ್ಯಾಜ್ಯ ಕಾರಣವಾಗಿರಬಹುದೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ. ಸ್ವದೇಶಿ ಮದ್ಯ ವ್ಯವಹಾರದಲ್ಲೂ ತೊಡಗಿಕೊಂಡಿದ್ದ ಗುಪ್ತಾ ತಿಂಗಳಿಗೆ 8-10 ಲಕ್ಷ ಆದಾಯ ಹೊಂದಿದ್ದ ಎಂದು ವಿವರಿಸಿದ್ದಾರೆ.