ಮುಂದಿನ ಸಿಎಂ ಕುರಿತ ಬಿಜೆಪಿ ನಿರ್ಧಾರಕ್ಕೆ ಅಡ್ಡಿಯಾಗುವುದಿಲ್ಲ: ಮಹಾರಾಷ್ಟ್ರ ಹಂಗಾಮಿ ಸಿಎಂ ಏಕನಾಥ್ ಶಿಂಧೆ
Photo credit: PTI
ಥಾಣೆ: ಮುಂದಿನ ಮುಖ್ಯಮಂತ್ರಿಯನ್ನು ಹೆಸರಿಸುವ ಬಿಜೆಪಿ ನಾಯಕತ್ವದ ನಿರ್ಧಾರವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಈ ಪ್ರಕ್ರಿಯೆಯಲ್ಲಿ ನಾನು ಅಡ್ಡಿಯಾಗುವುದಿಲ್ಲ ಎಂದು ಮಹಾರಾಷ್ಟ್ರದ ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬುಧವಾರ ಹೇಳಿದ್ದಾರೆ.
"ನಾನು ನಿನ್ನೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಕರೆ ಮಾಡಿ ಯಾರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ನಿರ್ಧರಿಸಲು ಹೇಳಿದ್ದೇನೆ. ಅವರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಅವರಿಗೆ ಭರವಸೆ ನೀಡಿದ್ದೇನೆ" ಎಂದು ಶಿಂಧೆ ಥಾಣೆಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಮುಂದಿನ ಮಹಾರಾಷ್ಟ್ರ ಮುಖ್ಯಮಂತ್ರಿಯನ್ನು ಹೆಸರಿಸುವ ಬಿಜೆಪಿಯ ನಿರ್ಧಾರವನ್ನು ನಮ್ಮ ಶಿವಸೇನೆ ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಮ್ಮ ಕಡೆಯಿಂದ ಅದಕ್ಕೆ ಯಾವುದೇ ಅಡೆತಡೆಯಿಲ್ಲ ಎಂದು ಶಿಂಧೆ ಹೇಳಿದರು.
ತಮ್ಮ ನಾಯಕತ್ವದಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟ ಭರ್ಜರಿ ಜಯಗಳಿಸಿದರೂ ಎರಡನೇ ಅವಧಿಗೆ ಸಿಎಂ ಸ್ಥಾನ ಸಿಗದೇ ನಿರಾಶೆಗೊಂಡಿದ್ದೇನೆ ಎಂಬ ವರದಿಗಳನ್ನು ಶಿಂಧೆ ತಳ್ಳಿಹಾಕಿದ್ದಾರೆ. ಮಹಾಯುತಿ ಮೈತ್ರಿಕೂಟದಲ್ಲಿ ಒಂದಾಗಿ ಕೆಲಸ ಮಾಡಲು ಯಾರಿಗೂ ಸಿಟ್ಟಿಲ್ಲ. ಎಲ್ಲರೂ ಜೊತೆಯಾಗಿದ್ದೇವೆ ಎಂದು ಅವರು ಹೇಳಿದರು.
ತಮ್ಮ 2.5 ವರ್ಷಗಳ ಸರ್ಕಾರಕ್ಕೆ ಬೆಂಬಲ ನೀಡಿದ ಮೋದಿ ಮತ್ತು ಅಮಿತ್ ಶಾ ಮತ್ತು ಬಿಜೆಪಿಗೆ ಶಿಂಧೆ ಧನ್ಯವಾದ ತಿಳಿಸಿದ್ದಾರೆ. ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿಗಾಗಿ ಸಾರ್ವಜನಿಕರು ಮತ್ತು ಪಕ್ಷದ ಕಾರ್ಯಕರ್ತರಿಗೆ ಶಿಂದೆ ಕೃಜತ್ಞತೆ ಸಲ್ಲಿಸಿದ್ದಾರೆ.