ಆಗಸ್ಟ್ 15ರೊಳಗೆ ಬೇಡಿಕೆ ಈಡೇರಿಸದಿದ್ದರೆ 28 ದಿನಗಳ ಉಪವಾಸ ಸತ್ಯಾಗ್ರಹ : ಸೋನಮ್ ವಾಂಗ್ ಚುಕ್
ಸೋನಮ್ ವಾಂಗ್ ಚುಕ್ | PTI
ಹೊಸದಿಲ್ಲಿ: ಲಡಾಖ್ ಕೇಂದ್ರಾಳಿತ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನ ನೀಡಬೇಕು ಹಾಗೂ ಸಾಂವಿಧಾನಿಕ ರಕ್ಷಣೆ ಒದಗಿಸಬೇಕು ಎಂಬ ಲಡಾಖ್ ಪ್ರಾಧಿಕಾರಗಳ ಬೇಡಿಕೆಯ ಕುರಿತು ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಸರಕಾರವೇನಾದರೂ ಮಾತುಕತೆಗೆ ಆಹ್ವಾನಿಸದಿದ್ದರೆ, ನಾನು ಮತ್ತೆ 28 ದಿನಗಳ ಉಪವಾಸ ಸತ್ಯಾಗ್ರಹ ನಡೆಸಲಿದ್ದೇನೆ ಎಂದು ರವಿವಾರ ಹವಾಮಾನ ಹೋರಾಟಗಾರ ಸೋನಮ್ ವಾಂಗ್ ಚುಕ್ ಎಚ್ಚರಿಸಿದ್ದಾರೆ.
PTI ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ವಾಂಗ್ ಚುಕ್, ಲಡಾಖ್ ನ ಉನ್ನತ ಸಂಸ್ಥೆಗಳಾದ ಲೇಹ್ (ಎಬಿಎಲ್) ಹಾಗೂ ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ ಈ ಕುರಿತು ಕಳೆದ ವಾರ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ದ್ರಾಸ್ ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೇಡಿಕೆಗಳ ನೆನಪೋಲೆ ಸಲ್ಲಿಸಿದೆ ಎಂದು ಹೇಳಿದ್ದಾರೆ.
“ಚುನಾವಣಾ ಸಂದರ್ಭದಲ್ಲಿ ಸರಕಾರದ ಮೇಲೆ ತೀರಾ ಒತ್ತಡ ಹೇರಲು ನಾವು ಬಯಸಲಿಲ್ಲ. ನೂತನ ಸರಕಾರವು ಈ ಕುರಿತು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ನಾವು ಭಾವಿಸಿದ್ದೆವು. ಅವರೇನಾದರೂ ನಮ್ಮ ಬೇಡಿಕೆಗಳಿಗೆ ಕಿವಿಗೊಡದಿದ್ದರೆ, ಒಂದು ವೇಳೆ ಅವರೇನಾದರೂ ನಮ್ಮನ್ನು ಮಾತುಕತೆಗೆ ಆಹ್ವಾನಿಸದಿದ್ದರೆ ನಾವು ಆಗಸ್ಟ್ 15ರಿಂದ ಮತ್ತೊಂದು ಸುತ್ತಿನ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದ್ದೇವೆ” ಎಂದು ಅವರು ಎಚ್ಚರಿಸಿದ್ದಾರೆ.
ಮಾರ್ಚ್ ತಿಂಗಳಲ್ಲಿ 21 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದ ವಾಂಗ್ ಚುಕ್, ಕೇವಲ ಉಪ್ಪು ಮತ್ತು ನೀರನ್ನು ಮಾತ್ರ ಸೇವಿಸಿ ಬದುಕುಳಿದಿದ್ದರು. ಲಡಾಖ್ ಗೆ ರಾಜ್ಯದ ಸ್ಥಾನಮಾನ ನೀಡಬೇಕು, ಪ್ರಾಕೃತಿಕವಾಗಿ ಸೂಕ್ಷ್ಮವಾಗಿರುವ ಲಡಾಖ್ ಅನ್ನು ಲಾಭಕೋರ ಉದ್ಯಮಗಳಿಂದ ರಕ್ಷಿಸಲು ಅದನ್ನು ಸಂವಿಧಾನದ ಆರನೆಯ ಪರಿಚ್ಛೇದದಡಿ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ಅವರು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.