ಮೋದಿ ಮಣಿಪುರಕ್ಕೆ ಭೇಟಿ ನೀಡಲಿದ್ದಾರೆಯೇ? : ಉದ್ಧವ್ ಠಾಕ್ರೆ ಪ್ರಶ್ನೆ
ನರೇಂದ್ರ ಮೋದಿ , ಉದ್ಧವ್ ಠಾಕ್ರೆ | PC : PTI
ಮುಂಬೈ : ಮಣಿಪುರದ ಪರಿಸ್ಥಿತಿಯ ಕುರಿತು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿಕೆ ನೀಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿಗೆ ಭೇಟಿ ನೀಡಲಿದ್ದಾರೆಯೇ? ಎಂದು ಶಿವಸೇನೆ (ಯುಟಿಬಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಬುಧವಾರ ಪ್ರಶ್ನಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370 ಅನ್ನು ರದ್ದುಗೊಳಿಸಿದ ಬಳಿಕ ಯಾವ ಬದಲಾವಣೆ ಆಗಿದೆ ಎಂಬುದನ್ನು ತಿಳಿಯಲು ಬಯಸುವುದಾಗಿ ಹೇಳಿದರು.
‘‘ಜೀವಗಳು ಬಲಿಯಾಗುತ್ತಿವೆ. ಜಮ್ಮು ಹಾಗೂ ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದಕ ದಾಳಿಗೆ ಯಾರು ಹೊಣೆ?’’ ಎಂದು ಅವರು ಪ್ರಶ್ನಿಸಿದ್ದಾರೆ.
‘‘ನನಗೆ ದೇಶದ ಭವಿಷ್ಯದ ಕುರಿತು ಕಾಳಜಿ ಇದೆಯೇ ಹೊರತು, ಎನ್ಡಿಎ ಸರಕಾರದ ಭವಿಷ್ಯ ಬಗ್ಗೆ ಅಲ್ಲ’’ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ನಾಲ್ಕು ಕ್ಷೇತ್ರಗಳಿಗೆ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳ ಕುರಿತಂತೆ ಶಿವಸೇನೆ (ಯುಬಿಟಿ), ಕಾಂಗ್ರೆಸ್ ಹಾಗೂ ಶರದ್ ಪವಾರ್ ನೇತೃತ್ವದ ಎನ್ಸಿಪಿ (ಎಸ್ಪಿ)ಯನ್ನು ಒಳಗೊಂಡ ಪ್ರತಿಪಕ್ಷ ಮಹಾ ವಿಕಾಸ ಅಘಾಡಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಅವರು ಹೇಳಿದರು.
ಮಾತುಕತೆ (ಮಹಾ ವಿಕಾಸ ಅಘಾಡಿ ಮಿತ್ರಪಕ್ಷಗಳೊಂದಿಗೆ)ಯಲ್ಲಿ ‘‘ಸಡಿಲ ಸಂಪರ್ಕ’’ ಇತ್ತು ಎಂಬುದು ಸತ್ಯ. ನಾನು ಲೋಕಸಭೆ ಚುನಾವಣೆಯ ಬಳಿಕ ಇಲ್ಲಿರಲಿಲ್ಲ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.