ಗೋ ಕಳ್ಳಸಾಗಣೆ ಶಂಕೆಯಲ್ಲಿ ವಿದ್ಯಾರ್ಥಿಯ ಹತ್ಯೆ ಕುರಿತು ಪ್ರಧಾನಿ ಮೋದಿ ಮಾತನಾಡುವರೆ?: ಕಪಿಲ್ ಸಿಬಲ್ ಪ್ರಶ್ನೆ
ಕಪಿಲ್ ಸಿಬಲ್ (PTI)
ಹೊಸದಿಲ್ಲಿ: ಗೋ ಕಳ್ಳಸಾಗಣೆದಾರನೆಂದು ತಪ್ಪಾಗಿ ಹತ್ಯೆಗೀಡಾಗಿರುವ 12ನೇ ತರಗತಿ ವಿದ್ಯಾರ್ಥಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಮಾತನಾಡುವರೆ ಎಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ. ದ್ವೇಷದ ಕಾರ್ಯಸೂಚಿಗೆ ಪ್ರೋತ್ಸಾಹ ನೀಡಿದ್ದರಿಂದಾಗಿ ಈ ಘಟನೆ ನಡೆದಿದೆ ಎಂದೂ ಅವರು ಹೇಳಿದ್ದಾರೆ.
ಆಗಸ್ಟ್ 23ರಂದು ಐವರು ಶಂಕಿತ ಗೋ ರಕ್ಷಕರು 12ನೇ ತರಗತಿಯ ವಿದ್ಯಾರ್ಥಿ ಆರ್ಯ ಮಿಶ್ರನನ್ನು ಗೋ ಕಳ್ಳಸಾಗಣೆದಾರ ಎಂದು ತಪ್ಪಾಗಿ ಭಾವಿಸಿ, ಆತನನ್ನು ಕಾರಿನಲ್ಲಿ ಹಿಂಬಾಲಿಸಿ ಫರೀದಾಬಾದ್ ನಲ್ಲಿ ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದು ಮಂಗಳವಾರ ಪೊಲೀಸ್ ಮೂಲಗಳು ತಿಳಿಸಿವೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕಪಿಲ್ ಸಿಬಲ್, “ನಮಗೆ ನಾಚಿಕೆಯಾಗಬೇಕು. 12ನೇ ತರಗತಿಯ ವಿದ್ಯಾರ್ಥಿ ಆರ್ಯನ್ ನನ್ನು ಗೋ ಕಳ್ಳಸಾಗಣೆದಾರ ಎಂದು ತಪ್ಪಾಗಿ ಭಾವಿಸಿ, ಹರ್ಯಾಣದಲ್ಲಿ ಆತನಿಗೆ ಗುಂಡು ಹೊಡೆದು ಹತ್ಯೆಗೈಯ್ಯಲಾಗಿದೆ. ಇದು ದ್ವೇಷದ ಕಾರ್ಯಸೂಚಿಗೆ ಕುಮ್ಮಕ್ಕು ನೀಡಿದ ಪರಿಣಾಮ” ಎಂದು ಕಿಡಿ ಕಾರಿದ್ದಾರೆ.
“ಈ ಘಟನೆಯ ಕುರಿತು ನಮ್ಮ ಪ್ರಧಾನಿ, ಉಪ ರಾಷ್ಟ್ರಪತಿ ಹಾಗೂ ನಮ್ಮ ಗೃಹ ಸಚಿವರು ಮಾತನಾಡುವರೆ?” ಎಂದು ಮಾಜಿ ಕೇಂದ್ರ ಸಚಿವರೂ ಆದ ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ.
ಆರ್ಯನ್ ಹತ್ಯೆಗೆ ಸಂಬಂಧಿಸಿದಂತೆ ಆಗಸ್ಟ್ 28ರಂದು ಎಲ್ಲ ಐವರು ಆರೋಪಿಗಳಾದ ಸೌರಭ್, ಅನಿಲ್ ಕೌಶಿಕ್, ವರುಣ್, ಕೃಷ್ಣ ಹಾಗೂ ಅದೇಶ್ ಅವರನ್ನು ಬಂಧಿಸಲಾಗಿದ್ದು, ಆರೋಪಿಗಳನ್ನು ಎರಡು ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ಮಂಗಳವಾರ ಬಿಡುಗಡೆ ಮಾಡಲಾಗಿರುವ ಪ್ರಕಟಣೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ (ಅಪರಾಧ) ಅಮನ್ ಯಾದವ್ ಹೇಳಿದ್ದಾರೆ.