ಭ್ರಷ್ಟಾಚಾರ ಆರೋಪ ಸಾಬೀತುಪಡಿಸಿದರೆ ರಾಜಕೀಯ ತೊರೆಯುವೆ: ಹೇಮಂತ್ ಸೊರೇನ್
ನನ್ನ ಬಂಧನಕ್ಕೆ ರಾಜಭವನದಲ್ಲಿ ಪಿತೂರಿ
ಹೇಮಂತ್ ಸೊರೇನ್ | Photo : PTI
ರಾಂಚಿ : ನನ್ನ ಬಂಧನಕ್ಕೆ ಕೇಂದ್ರ ಸರಕಾರ ಪಿತೂರಿ ನಡೆಸಿತು. ರಾಜಭವನವು ಅದರಲ್ಲಿ ಸಕ್ರಿಯವಾಗಿ ಶಾಮೀಲಾಗಿತ್ತು ಎಂದು ಬಂಧಿತ ಮಾಜಿ ಮುಖ್ಯಮಂತ್ರಿ ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚ ನಾಯಕ ಹೇಮಂತ್ ಸೊರೇನ್ ಸೋಮವಾರ ಆರೋಪಿಸಿದ್ದಾರೆ.
ಜಾರ್ಖಂಡ್ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಕೋರುವ ಕಲಾಪದಲ್ಲಿ ಭಾಗವಹಿಸಿದ ಹೇಮಂತ್ ಸೊರೇನ್, ಈ ವಾಗ್ದಾಳಿ ನಡೆಸಿದ್ದಾರೆ. ಅವರಿಗೆ ವಿಶ್ವಾಸಮತ ಕೋರುವ ಕಲಾಪದಲ್ಲಿ ಭಾಗವಹಿಸಲು ವಿಶೇಷ ಪಿಎಮ್ಎಲ್ಎ ನ್ಯಾಯಾಲಯವು ಅನುಮತಿ ನೀಡಿತ್ತು.
‘‘ದೇಶದ ಪ್ರಜಾಸತ್ತೆಗೆ ಜನವರಿ 31ರಂದು ಒಂದು ಕರಾಳ ರಾತ್ರಿ ಮತ್ತು ಕರಾಳ ಅಧ್ಯಾಯವೊಂದು ಸೇರ್ಪಡೆಗೊಂಡಿತು. ರಾಜಭವನದ ಒಳಗೆ ಮುಖ್ಯಮಂತ್ರಿಯೊಬ್ಬರನ್ನು ಬಂಧಿಸಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು ಎಂದು ನನಗನಿಸುತ್ತದೆ. ಇಂಥ ಘಟನೆ ಇದಕ್ಕಿಂತ ಮೊದಲು ನಡೆದಿರುವುದು ನನಗೆ ಗೊತ್ತಿಲ್ಲ. ಈ ಘಟನೆಯಲ್ಲಿ ರಾಜಭವನ ಶಾಮೀಲಾಗಿದೆ ಎಂದು ನನಗನಿಸುತ್ತದೆ’’ ಎಂದು ಜೆಎಮ್ಎಮ್ ಕಾರ್ಯಕಾರಿ ಅಧ್ಯಕ್ಷರು ಹೇಳಿದರು.
‘‘ಕೇಂದ್ರ ಸರಕಾರಕ್ಕೆ ದಲಿತರು, ಆದಿವಾಸಿಗಳ ಬಗ್ಗೆ ಯಾಕಿಷ್ಟು ದ್ವೇಷ?’’
‘‘ಕೇಂದ್ರದ ಆಡಳಿತಾರೂಢ ಸರಕಾರಕ್ಕೆ ಆದಿವಾಸಿಗಳು ಮತ್ತು ದಲಿತರ ಬಗ್ಗೆ ಇಷ್ಟೊಂದು ದ್ವೇಷ ಯಾಕೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ನಾವು ಕಾಡುಗಳಲ್ಲಿ ವಾಸಿಸಬೇಕೆಂದು ಹೇಳಲೂ ಅವರು ಹಿಂಜರಿಯುವುದಿಲ್ಲ. ನಾವು ಕಾಡುಗಳಿಂದ ಹೊರಬಂದರೆ, ನಮಗೆ ಗೋರಿಗಳು ಸಿದ್ಧವಾಗಿರುತ್ತವೆ. ನಾವು ಅಸ್ಪಶ್ಯರು ಎಂದು ಅವರು ಭಾವಿಸುತ್ತಾರೆ’’ ಎಂದು ಹೇಮಂತ್ ಸೊರೇನ್ ಹೇಳಿದರು.
‘‘ಈ ದೇಶದಲ್ಲಿ ಆದಿವಾಸಿಗಳು, ದಲಿತರು ಮತ್ತು ಇತರ ಶೋಷಿತ ಗುಂಪುಗಳ ಕಣ್ಣೀರಿಗೆ ಬೆಲೆಯಿಲ್ಲ. ಆದರೆ, ಸರಿಯಾದ ಸಮಯ ಬಂದಾಗ ಅವರು ತಮಗಾದ ಅನ್ಯಾಯಕ್ಕೆ ಸರಿಯಾದ ಉತ್ತರ ನೀಡುತ್ತಾರೆ’’ ಎಂದರು.
ನನ್ನ ವಿರುದ್ಧದ ಭೂಹಗರಣ ಪ್ರಕರಣದಲ್ಲಿ ಒಂದೇ ಒಂದು ಭ್ರಷ್ಟಾಚಾರ ಆರೋಪ ಸಾಬೀತಾದರೂ ನಾನು ರಾಜಕೀಯವನ್ನು ತೊರೆದು ಜಾರ್ಖಂಡ್ನಿಂದ ಹೊರಹೋಗುತ್ತೇನೆ ಎಂದು ಹೇಮಂತ್ ಸೊರೇನ್ ಹೇಳಿದರು.
‘‘ನನ್ನ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಸಾಬೀತುಪಡಿಸುವಂತೆ ನಾನು ಬಿಜೆಪಿಗೆ ಸವಾಲು ಹಾಕುತ್ತೇನೆ. ಸಾಬೀತಾದರೆ ನಾನು ರಾಜಕೀಯಕ್ಕೇ ರಾಜೀನಾಮೆ ನೀಡುತ್ತೇನೆ’’ ಎಂದರು.
‘‘ಆದರೆ, ನಾನು ಈಗ ಕಣ್ಣೀರು ಹಾಕುವುದಿಲ್ಲ. ನಾನು ಊಳಿಗಮಾನ್ಯ ಶಕ್ತಿಗಳ ವಿರುದ್ಧ ಸರಿಯಾದ ಸಮಯದಲ್ಲಿ ಸರಿಯಾದ ಉತ್ತರ ನೀಡುತ್ತೇನೆ’’ ಎಂದು ಘೋಷಿಸಿದರು.