'ಭಾರತ್ ಮಾತಾ ಕಿ ಜೈ', 'ಜೈ ಹಿಂದ್' ಮೊದಲು ಕೂಗಿದ್ದು ಮುಸ್ಲಿಮರು, ಈ ಘೋಷಣೆಗಳನ್ನು ಸಂಘಪರಿವಾರ ತ್ಯಜಿಸುತ್ತದೆಯೇ?: ಪಿಣರಾಯಿ ವಿಜಯನ್ ಪ್ರಶ್ನೆ
ಪಿಣರಾಯಿ ವಿಜಯನ್ | Photo: PTI
ಮಲಪ್ಪುರಮ್: ‘‘ಭಾರತ್ ಮಾತಾ ಕಿ ಜೈ’’ ಮತ್ತು ‘‘ಜೈ ಹಿಂದ್’’ ಎಂಬ ಘೋಷಣೆಗಳನ್ನು ಮೊದಲು ಕೂಗಿದವರು ಇಬ್ಬರು ಮುಸ್ಲಿಮರು ಎಂದು ಹೇಳಿರುವ ಕೇರಳ ಮಖ್ಯಮಂತ್ರಿ ಪಿಣರಾಯಿ ವಿಜಯನ್, ಹಾಗಾದರೆ, ಈ ಘೋಷಣೆಗಳನ್ನು ಸಂಘ ಪರಿವಾರ ತ್ಯಜಿಸುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಮುಸ್ಲಿಮ್ ಪ್ರಾಬಲ್ಯದ ಉತ್ತರ ಕೇರಳದ ಜಿಲ್ಲೆ ಮಲಪ್ಪುರಮ್ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಸಿಪಿಎಮ್ ನಾಯಕ ಪಿಣರಾಯಿ ವಿಜಯನ್, ದೇಶದ ಇತಿಹಾಸ ಮತ್ತು ಸ್ವಾತಂತ್ರ್ಯ ಚಳವಳಿಯಲ್ಲಿ ಮುಸ್ಲಿಮ್ ದೊರೆಗಳು, ಸಾಂಸ್ಕೃತಿಕ ದಿಗ್ಗಜರು ಮತ್ತು ಅಧಿಕಾರಿಗಳು ಗಣನೀಯ ಪಾತ್ರ ವಹಿಸಿದ್ದರು ಎಂದು ಹೇಳಿದರು.
ಇತಿಹಾಸದಿಂದ ಉದಾಹರಣೆಗಳನ್ನು ಉಲ್ಲೇಖಿಸಿದ ಅವರು, ಅಝಿಮುಲ್ಲಾ ಖಾನ್ ಎಂಬ ಮುಸ್ಲಿಮ್ ವ್ಯಕ್ತಿ ‘‘ಭಾರತ್ ಮಾತಾ ಕಿ ಜೈ’’ ಎಂಬ ಘೋಷಣೆಯನ್ನು ಹುಟ್ಟು ಹಾಕಿದ್ದರು ಎಂದರು.
‘‘ಇಲ್ಲಿಗೆ ಬಂದಿರುವ ಕೆಲವು ಸಂಘ ಪರಿವಾರ ನಾಯಕರು, ತಮ್ಮೆದುರಿನಲ್ಲಿ ಕುಳಿತ ಜನರಲ್ಲಿ ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಯನ್ನು ಕೂಗಲು ಹೇಳಿದರು. ಆ ಘೋಷಣೆಯನ್ನು ಹುಟ್ಟು ಹಾಕಿದ್ದು ಯಾರು? ಅದನ್ನು ಹುಟ್ಟು ಹಾಕಿದ ವ್ಯಕ್ತಿಯ ಹೆಸರು ಅಝಿಮುಲ್ಲಾ ಖಾನ್ ಎನ್ನುವುದು ಸಂಘ ಪರಿವಾರಕ್ಕೆ ಗೊತ್ತಿದೆಯೇ ಇಲ್ಲವೋ ನನಗೆ ಗೊತ್ತಿಲ್ಲ’’ ಎಂದು ಕೇರಳ ಮುಖ್ಯಮಂತ್ರಿ ಹೇಳಿದರು.
ಈ ಘೋಷಣೆಯನ್ನು ಸೃಷ್ಟಿಸಿದ್ದು ಓರ್ವ ಮುಸ್ಲಿಮ್ ಎನ್ನುವುದು ಗೊತ್ತಾದ ಬಳಿಕ ಅವರು ಈ ಘೋಷಣೆ ಕೂಗುವುದನ್ನು ನಿಲ್ಲಿಸುತ್ತಾರೆಯೇ ಎನ್ನುವುದೂ ನನಗೆ ಗೊತ್ತಿಲ್ಲ ಎಂದರು.