ನೀವು ಹರಡಿರುವ ಪ್ರತಿ ಸುಳ್ಳನ್ನೂ ನ್ಯಾಯಾಲಯದ ಮುಂದೆ ಒಯ್ಯಲಿದ್ದೇನೆ: ಆಪ್ ವಿರುದ್ಧ ಸ್ವಾತಿ ಮಲಿವಾಲ್ ವಾಗ್ದಾಳಿ
ಸ್ವಾತಿ ಮಲಿವಾಲ್ (Photo: PTI)
ಹೊಸದಿಲ್ಲಿ: ತನ್ನ ವಿರುದ್ಧ ಭ್ರಷ್ಟಾಚಾರದ ಪ್ರಕರಣ ದಾಖಲಾಗಿದೆ ಎಂದು ದಿಲ್ಲಿ ಸಚಿವರು ಹಾಗೂ ಆಪ್ ನಾಯಕರು ಸುಳ್ಳು ಹರಡುತ್ತಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಆಪ್ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್, ಈ ಕುರಿತು ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಇತ್ತೀಚೆಗೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಬಿಭವ್ ಕುಮಾರ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದ ಸ್ವಾತಿ ಮಲಿವಾಲ್, ಅವರ ವಿರುದ್ಧ ಪೊಲೀಸ್ ದೂರನ್ನೂ ದಾಖಲಿಸಿದ್ದರು.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಸ್ವಾತಿ ಮಲಿವಾಲ್, “ನಾನು ಸದ್ಯ ಬಂಧಿತರಾಗಿರುವ ಬಿಭವ್ ಕುಮಾರ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಕೂಡಲೇ ಪಕ್ಷದಲ್ಲಿನ ನನ್ನ ಸ್ಥಾನಮಾನವು ಲೇಡಿ ಸಿಂಗಂನಿಂದ ಬಿಜೆಪಿ ಏಜೆಂಟ್ ಆಗಿ ಬದಲಾಗಿದೆ” ಎಂದು ವ್ಯಂಗ್ಯವಾಡಿದ್ದಾರೆ.
“ಅವರ ಪ್ರಕಾರ, ಬಿಭವ್ ಕುಮಾರ್ ವಿರುದ್ಧ ದೂರು ದಾಖಲಿಸುವವರೆಗೂ ಲೇಡಿ ಸಿಂಗಂ ಆಗಿದ್ದ ನಾನು, ಇಂದು ಬಿಜೆಪಿ ಏಜೆಂಟ್ ಆಗಿಬಿಟ್ಟೆನೆ? ನೀವು ಹರಡುತ್ತಿರುವ ಪ್ರತಿ ಸುಳ್ಳುಗಳಿಗೂ ನಿಮ್ಮನ್ನು ನ್ಯಾಯಾಲಯಕ್ಕೆ ಎಳೆಯಲಿದ್ದೇನೆ” ಎಂದು ಸೋಮವಾರದ ತಮ್ಮ ಪೋಸ್ಟ್ ನಲ್ಲಿ ಸ್ವಾತಿ ಮಲಿವಾಲ್ ಎಚ್ಚರಿಸಿದ್ದಾರೆ.
“ನಿನ್ನೆಯವರೆಗೂ ದಿಲ್ಲಿ ಸಚಿವರು ಭ್ರಷ್ಟಾಚಾರದ ಕಾರಣಕ್ಕೆ ನನ್ನ ವಿರುದ್ಧ ಎಫ್ಐಆರ್ ದಾಖಲಾಗಿದೆ ಹಾಗೂ ನಾನಿದನ್ನೆಲ್ಲ ಬಿಜೆಪಿ ಸೂಚನೆಯ ಮೇರೆಗೆ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದರು. ಆದರೆ, ನನ್ನ ವಿರುದ್ಧ 2016ರಲ್ಲಿ ಎಂಟು ವರ್ಷಗಳ ಹಿಂದೆ ಈ ಎಫ್ಐಆರ್ ದಾಖಲಾಗಿತ್ತು. ಇದಾದ ನಂತರವೂ ನನ್ನನ್ನು ಎರಡು ಬಾರಿ ಮಹಿಳಾ ಆಯೋಗದ ಅಧ್ಯಕ್ಷೆಯನ್ನಾಗಿ ಮುಖ್ಯಮಂತ್ರಿ ಹಾಗೂ ಲೆಫ್ಟಿನೆಂಟ್ ಗವರ್ನರ್ ನೇಮಕ ಮಾಡಿದ್ದರು. ಈ ಪ್ರಕರಣ ನಕಲಿಯಾಗಿದ್ದು, ಈ ಪ್ರಕರಣದಲ್ಲಿ ಯಾವುದೇ ನಗದು ವಹಿವಾಟು ನಡೆದಿಲ್ಲ ಎಂದು ಒಪ್ಪಿಕೊಂಡಿರುವ ಮಾನ್ಯ ದಿಲ್ಲಿ ನ್ಯಾಯಾಲಯವು ಕಳೆದ ಒಂದೂವರೆ ವರ್ಷದಿಂದ ಈ ಪ್ರಕರಣಕ್ಕೆ ತಡೆ ನೀಡಿದೆ” ಎಂದೂ ಅವರು ತಮ್ಮ ವಿರುದ್ಧದ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಈ ನಡುವೆ, ಬಿಭವ್ ಕುಮಾರ್ ರನ್ನು ಬಂಧಿಸಿದ ನಂತರ, ಅವರನ್ನು ದಿಲ್ಲಿಯ ತೀಸ್ ಹಝಾರಿಯಾ ನ್ಯಾಯಾಲಯದೆದುರು ಹಾಜರು ಪಡಿಸಲಾಯಿತು. ನಂತರ ನ್ಯಾಯಾಲಯವು ಅವರನ್ನು ಐದು ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಿತು.
ಶುಕ್ರವಾರ ಬಿಭವ್ ಕುಮಾರ್ ಕೂಡಾ ಸ್ವಾತಿ ಮಲಿವಾಲ್ ವಿರುದ್ಧ ಪೊಲೀಸರಿಗೆ ಪ್ರತಿ ದೂರು ನೀಡಿದ್ದು, ಸ್ವಾತಿ ಮಲಿವಾಲ್ ಅನಧಿಕೃತವಾಗಿ ಮುಖ್ಯಮಂತ್ರಿಗಳ ಸಿವಿಲ್ ಲೈನ್ಸ್ ನಿವಾಸಕ್ಕೆ ಪ್ರವೇಶಿಸಲು ಯತ್ನಿಸಿದರು ಹಾಗೂ ಮೌಖಿಕವಾಗಿ ತನ್ನನ್ನು ನಿಂದಿಸಿದರು ಎಂದು ಆರೋಪಿಸಿದ್ದಾರೆ.