ಅಗ್ನಿಪಥ್ ಯೋಜನೆ ರದ್ದುಗೊಳಿಸಲು ಪ್ರಧಾನಿ ಬದ್ಧರಾಗುವರೇ? : ಕಾಂಗ್ರೆಸ್
ಜೈರಾಮ್ ರಮೇಶ್ , ನರೇಂದ್ರ ಮೋದಿ | PTI
ಹೊಸದಿಲ್ಲಿ: ಹಿಮಾಚಲ ಪ್ರದೇಶದ ಜನರು ಅಗ್ನಿಪಥ್ ಯೋಜನೆ ವಿರುದ್ಧ ಪದೇ ಪದೇ ಧ್ವನಿ ಎತ್ತಿದ್ದಾರೆ ಎಂದು ಕಾಂಗ್ರೆಸ್ ಶುಕ್ರವಾರ ಹೇಳಿದೆ.
ಹಿಮಾಚಲ ಪ್ರದೇಶದಲ್ಲಿ ಪ್ರದಾನಿ ನರೇಂದ್ರ ಮೋದಿ ಅವರು ಚುನಾವಣಾ ರ್ಯಾಲಿ ನಡೆಸುವ ಮುನ್ನ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಪ್ರಧಾನಿ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಪಕ್ವ ಸೇನಾ ನೇಮಕಾತಿ ಯೋಜನೆಯನ್ನು ರದ್ದುಗೊಳಿಸಲು ಬದ್ಧರಾಗುವರೇ? ಎಂದು ಅವರು ಪ್ರಶ್ನಿಸಿದ್ದಾರೆ.
‘‘ಹಿಮಾಚಲಪ್ರದೇಶ ಸರಕಾರವನ್ನು ಉರುಳಿಸಲು ಬಿಜೆಪಿಗೆ ಎಷ್ಟು ವೆಚ್ಚವಾಯಿತು? ನಿರ್ಗಮನ ಪ್ರಧಾನಿ ಅಗ್ನಿಪಥ್ ಯೋಜನೆಯನ್ನು ರದ್ದುಗೊಳಿಸಲು ಬದ್ಧರಾಗಿದ್ದಾರೆಯೆ? ಮೋದಿ ಸರಕಾರ ರೈಲ್ವೆ ಯೋಜನೆಯನ್ನು ಯಾಕೆ ನೀಡಿಲ್ಲ? ನಿರ್ಗಮನ ಪ್ರಧಾನಿ 2023ರಲ್ಲಿ ಸಂಭವಿಸಿದ ನೆರೆಯನ್ನು ರಾಷ್ಟ್ರೀಯ ವಿಪತ್ತು ಎಂದು ಯಾಕೆ ಘೋಷಿಸಿಲ್ಲ?’’ ಎಂದು ಅವರು ಪ್ರಶ್ನಿಸಿದ್ದಾರೆ.
ಬಿಜೆಪಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಿರ್ಲಕ್ಷಿಸಿರುವುದು ಹಿಮಾಚಲಪ್ರದೇಶದಲ್ಲಿ ಬಹಿರಂಗಗೊಂಡಿದೆ ಎಂದು ಅವರು ಹೇಳಿದ್ದಾರೆ.