ಸಿದ್ದರಾಮಯ್ಯರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುತ್ತೀರಾ?: ರಾಹುಲ್ ಗಾಂಧಿಗೆ ಟಿಎಂಸಿ ಪ್ರಶ್ನೆ
ರಾಹುಲ್ ಗಾಂಧಿ (Photo: PTI)
ಕೋಲ್ಕತ್ತಾ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಿ (ಮುಡಾ) ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಪ್ರಾಸಿಕ್ಯೂಷನ್ಗೆ ಗುರಿಯಾಗಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಾಜೀನಾಮೆ ಸಲ್ಲಿಸುವಂತೆ ಕಾಂಗ್ರೆಸ್ ಸೂಚಿಸಲಿದೆಯೆ ಎಂದು ಪಶ್ಚಿಮ ಬಂಗಾಳದ ಆಡಳಿತಾರೂಢ ಪಕ್ಷವಾದ ತೃಣಮೂಲ ಕಾಂಗ್ರೆಸ್ ಪಕ್ಷವು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿಯವರನ್ನು ಪ್ರಶ್ನಿಸಿದೆ. ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವ ಬದಲು ಆರೋಪಿಗಳನ್ನು ರಕ್ಷಿಸಲಾಗುತ್ತಿದೆ ಎಂದು ರಾಹುಲ್ ಗಾಂಧಿ ಇತ್ತೀಚೆಗೆ ನೀಡಿದ್ದ ಹೇಳಿಕೆಗೆ ಟಿಎಂಸಿ ತಿರುಗೇಟು ನೀಡಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಟಿಎಂಸಿಯ ಮಾಜಿ ರಾಜ್ಯಸಭಾ ಸದಸ್ಯ ಕುನಾಲ್ ಘೋಷ್, “ಹಾಗಾದರೆ ರಾಹುಲ್ ಗಾಂಧಿ ನೀವು ನಿಮ್ಮ ಮುಖ್ಯಮಂತ್ರಿಗೆ ರಾಜೀನಾಮೆ ಸಲ್ಲಿಸಲು ಸೂಚಿಸುವಿರಾ? ಇದು ಗಂಭೀರ ಭ್ರಷ್ಟಾಚಾರದ ಆರೋಪವಾಗಿದೆ. ಪಶ್ಚಿಮ ಬಂಗಾಳದಲ್ಲಿನ ಘಟನೆಯ ಕುರಿತು ಸೂಕ್ತ ಮಾಹಿತಿಯಿಲ್ಲದೆ, ಮಮತಾ ಬ್ಯಾನರ್ಜಿ ತೆಗೆದುಕೊಂಡ ಕ್ರಮಗಳನ್ನು ಅರಿಯದೆ ನೀವು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಯೊಂದನ್ನು ನೀಡಿದ್ದಿರಿ. ಈಗ ನೀವು ನಿಮ್ಮ ಮುಖ್ಯಮಂತ್ರಿ ಕುರಿತು ಕ್ರಮ ತೆಗೆದುಕೊಳ್ಳುತ್ತೀರಾ?” ಎಂದು ಪ್ರಶ್ನಿಸಿದ್ದಾರೆ.
ಕೋಲ್ಕತ್ತಾದ ಸರಕಾರಿ ಆಸ್ಪತ್ರೆಯಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೀಡಾಗಿ, ಹತ್ಯೆಗೊಳಗಾಗಿದ್ದ ತರಬೇತಿ ನಿರತ ವೈದ್ಯೆಯ ಪೋಷಕರ ಪರ ಗುರುವಾರ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ರಾಹುಲ್ ಗಾಂಧಿ, “ಈ ಸಹಿಸಲಸಾಧ್ಯವಾದ ನೋವಿನಲ್ಲಿ ನಾನು ಸಂತ್ರಸ್ತೆಯ ಪೋಷಕರ ಪರ ನಿಲ್ಲುತ್ತೇನೆ. ಅವರಿಗೆ ಯಾವುದೇ ಬೆಲೆಯಲ್ಲಾದರೂ ನ್ಯಾಯ ದೊರೆಯಬೇಕಿದೆ ಹಾಗೂ ದುಷ್ಕರ್ಮಿಗಳಿಗೆ ಹೇಗೆ ಶಿಕ್ಷೆ ನೀಡಬೇಕೆಂದರೆ, ಅದು ಸಮಾಜಕ್ಕೆ ಒಂದು ನಿದರ್ಶನವಾಗಬೇಕು. ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಬದಲು, ಆರೋಪಿಗಳನ್ನು ರಕ್ಷಿಸಲು ನಡೆಯುತ್ತಿರುವ ಪ್ರಯತ್ನಗಳು ಆಸ್ಪತ್ರೆ ಹಾಗೂ ಸ್ಥಳೀಯ ಆಡಳಿತದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಮೂಡಿಸುತ್ತದೆ” ಎಂದು ಹೇಳಿದ್ದರು.
ಕೋಲ್ಕತ್ತಾದ ವೈದ್ಯೆಯ ಮೇಲೆ ನಡೆದಿರುವ ಅಮಾನುಷ ಅತ್ಯಾಚಾರ ಮತ್ತು ಹತ್ಯೆಯನ್ನು ತೀವ್ರವಾಗಿ ಖಂಡಿಸಿರುವ ಇಂಡಿಯಾ ಮೈತ್ರಿಕೂಟದ ಅಂಗಪಕ್ಷಗಳು, ಈ ಸಂಬಂಧ ಮಮತಾ ಬ್ಯಾನರ್ಜಿ ತೆಗೆದುಕೊಂಡಿರುವ ಕ್ರಮಗಳ ಬೆಂಬಲಕ್ಕೆ ನಿಂತಿವೆ. ಆದರೆ, ಪಶ್ಚಿಮ ಬಂಗಾಳ ಕಾಂಗ್ರೆಸ್ ಘಟಕ ಮಾತ್ರ ಈ ಘಟನೆಯನ್ನು ಮುಂದಿಟ್ಟುಕೊಂಡು ಆಡಳಿತಾರೂಢ ಟಿಎಂಸಿ ವಿರುದ್ಧ ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಿದೆ.