ಮುಂಬೈ ಕಾಲೇಜಿನ ಹಿಜಾಬ್ ನಿಷೇಧಕ್ಕೆ ಭಾಗಶಃ ತಡೆಯಾಜ್ಞೆ ವಿಧಿಸಿದ ಸುಪ್ರೀಂ ಕೋರ್ಟ್
“ಬಿಂದಿ, ತಿಲಕ ಧರಿಸಿದ ಹುಡುಗಿಯರಿಗೂ ನಿಷೇಧ ಹೇರುತ್ತೀರಾ?” ಎಂದು ಪ್ರಶ್ನಿಸಿದ ನ್ಯಾಯಾಲಯ
ಹೊಸದಿಲ್ಲಿ: ಮುಂಬೈನ ಕಾಲೇಜೊಂದು ಹಿಜಾಬ್ ನಿಷೇಧಿಸಿ ಹೊರಡಿಸಿದ ಆದೇಶದ ಜಾರಿಗೆ ಸುಪ್ರೀಂ ಕೋರ್ಟ್ ಇಂದು ಭಾಗಶಃ ತಡೆಯಾಜ್ಞೆ ವಿಧಿಸಿದೆ.
“ನೀವು ಬಿಂದಿ ಅಥವಾ ತಿಲಕ ಧರಿಸುವ ಹುಡುಗಿಯರನ್ನು ನಿಷೇಧಿಸುತ್ತೀರಾ,” ಎಂದು ಕಾಲೇಜು ತನ್ನ ಕ್ಯಾಂಪಸ್ನಲ್ಲಿ ಹಿಜಾಬ್, ಕ್ಯಾಪ್ ಅಥವಾ ಬ್ಯಾಡ್ಜ್ ಧರಿಸುವುದಕ್ಕೆ ಹೇರಿರುವ ನಿಷೇಧ ಕುರಿತು ಸುಪ್ರೀಂ ಕೋರ್ಟ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. “ಹಿಜಾಬ್, ಕ್ಯಾಪ್ ಅಥವಾ ಬ್ಯಾಡ್ಜ್ ಧರಿಸಬಾರದೆಂಬ ನಿರ್ದೇಶನಕ್ಕೆ ಸಂಬಂಧಿಸಿದಂತೆ ಕಾಲೇಜಿನ ಸುತ್ತೋಲೆಗೆ ತಡೆಯಾಜ್ಞೆ ವಿಧಿಸಲಾಗಿದೆ,” ಎಂದು ನ್ಯಾಯಾಲಯ ಹೇಳಿದೆ.
ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅನುಮತಿಸಿದರೆ ಹಿಂದು ವಿದ್ಯಾರ್ಥಿಗಳು ಕೇಸರಿ ಶಾಲ್ಗಳನ್ನು ಧರಿಸಬಹುದು ಮತ್ತು ಈ ಸನ್ನಿವೇಶವನ್ನು ಇದನ್ನು ರಾಜಕೀಯ ಶಕ್ತಿಗಳು ದುರ್ಬಳಕೆ ಮಾಡಬಹುದು ಎಂದು ಕಾಲೇಜು ತನ್ನ ವಾದ ಮಂಡನೆ ವೇಳೆ ತಿಳಿಸಿತ್ತು.
ತನ್ನ ಮಧ್ಯಂತರ ಆದೇಶವನ್ನು ದುರ್ಬಳಕೆ ಮಾಡಬಾರದು ಎಂದು ಹೇಳಿದ ನ್ಯಾಯಾಲಯ ಹಾಗೇನಾದರೂ ಆದಲ್ಲಿ ನ್ಯಾಯಾಲಯದ ಕದ ತಟ್ಟಬಹುದು ಎಂದು ಕಾಲೇಜಿಗೆ ಹೇಳಿದೆ.
ಆದರೆ ವಿದ್ಯಾರ್ಥಿನಿಯರು ತರಗತಿ ಒಳಗೆ ಬುರ್ಖಾ ಧರಿಸಬಾರದು ಮತ್ತು ಕ್ಯಾಂಪಸ್ನಲ್ಲಿ ಧಾರ್ಮಿಕ ಚಟುವಟಿಕೆಗಳಿಗೆ ಅನುಮತಿಸಬಾರದು ಎಂದು ನ್ಯಾಯಾಲಯ ಹೇಳಿದೆ.
ಮುಂಬೈನ ಕಾಲೇಜೊಂದರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು. ಯುನಿಟ್ ಪರೀಕ್ಷೆಗಳಿರುವುದರಿಂದ ತುರ್ತು ವಿಚಾರಣೆಗೆ ಕೋರಲಾಗಿತ್ತು.
ಈ ಹಿಂದೆ ಜೂನ್ 26ರಂದು ಹೈಕೋರ್ಟ್ ತಾನು ಕಾಲೇಜಿನ ತೀರ್ಮಾನದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿತ್ತು.