ಸಂಸತ್ತಿನ ಚಳಿಗಾಲದ ಅಧಿವೇಶನ | ಸರ್ವಪಕ್ಷ ಸಭೆಯಲ್ಲಿ ಆದ್ಯತೆ ಪಡೆದ ಅದಾನಿ ಲಂಚ ಆರೋಪ, ಮಣಿಪುರ ಹಿಂಸಾಚಾರ
PC : X
ಹೊಸದಿಲ್ಲಿ : ಸೋಮವಾರದಿಂದ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದ ಮುನ್ನಾ ದಿನ ನಡೆದ ಸಾಂಪ್ರದಾಯಿಕ ಸರ್ವಪಕ್ಷ ಸಭೆಯಲ್ಲಿ ಪ್ರತಿಪಕ್ಷಗಳು ಅದಾನಿ ಗ್ರೂಪ್ ವಿರುದ್ಧ ಅಮೆರಿಕದ ಪ್ರಾಸಿಕ್ಯೂಷನ್ ಹೊರಿಸಿರುವ ಲಂಚ ಆರೋಪಗಳ ಕುರಿತು ಸಂಸದೀಯ ಚರ್ಚೆಗೆ ಆಗ್ರಹಿಸಿದವು. ಆದರೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ ರಿಜಿಜು ಅವರು, ಅಧಿಕೃತ ಸಮಿತಿಗಳು ಉಭಯ ಸದನಗಳ ಅಧ್ಯಕ್ಷರೊಂದಿಗೆ ಸಮಾಲೋಚಿಸಿ ಸಂಸತ್ತಿನ ಕಾರ್ಯಸೂಚಿಯನ್ನು ನಿರ್ಧರಿಸುತ್ತವೆ ಎಂದು ಸ್ಪಷ್ಟಪಡಿಸಿದರು.
ರಕ್ಷಣಾ ಸಚಿವ ರಾಜನಾಥ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 30 ರಾಜಕೀಯ ಪಕ್ಷಗಳ 42 ನಾಯಕರು ಭಾಗವಹಿಸಿದ್ದರು.
ನ.25ರಿಂದ ಡಿ.20ರವರೆಗೆ ನಡೆಯಲಿರುವ ಅಧಿವೇಶನದ ಸುಗಮ ಕಾರ್ಯಾಚರಣೆಗೆ ಸಹಕರಿಸುವಂತೆ ರಿಜಿಜು ಎಲ್ಲ ಪಕ್ಷಗಳನ್ನು ಆಗ್ರಹಿಸಿದರು.
►ಅದಾನಿ,ಮಣಿಪುರ ವಿಷಯಗಳನ್ನೆತ್ತಿದ ಕಾಂಗ್ರೆಸ್
ಅದಾನಿ ವಿರುದ್ಧ ಲಂಚ ಆರೋಪಗಳನ್ನು‘ಹಗರಣ’ ಎಂದು ಬಣ್ಣಿಸಿದ ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಗೌರವ್ ಗೊಗೊಯಿ ಅವರು, ಆದ್ಯತೆಯ ಮೇಲೆ ಈ ವಿಷಯವನ್ನು ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿದರು.
ಭಾರತದ ಆರ್ಥಿಕತೆ ಮತ್ತು ಭದ್ರತಾ ಹಿತಾಸಕ್ತಿಗಳ ಮೇಲೆ ಅದಾನಿ ವಿರುದ್ಧದ ಲಂಚ ಆರೋಪಗಳ ಪರಿಣಾಮಗಳನ್ನು ಒತ್ತಿ ಹೇಳಿದ ಕಾಂಗ್ರೆಸ್ ನಾಯಕ ಪ್ರಮೋದ ತಿವಾರಿಯವರು ತಕ್ಷಣ ಚರ್ಚೆಗೆ ಕರೆ ನೀಡಿದರು. ಮಣಿಪುರ ಹಿಂಸಾಚಾರ ಕುರಿತು ಚರ್ಚೆಗೆ ತನ್ನ ಆಗ್ರಹವನ್ನು ಪ್ರತಿಪಕ್ಷವು ಪುನರುಚ್ಚರಿಸಿದರೆ ಗೊಗೊಯಿ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರಿಗೆ ಸರಕಾರದ ನಿರಂತರ ಬೆಂಬಲವನ್ನು ಪ್ರಶ್ನಿಸಿದರು.
►ಪುನರ್ ಸಂಘಟನೆ ಕಾಯ್ದೆ ಭರವಸೆಗಳಿಗೆ ಆಂಧ್ರ ಪಕ್ಷಗಳ ಒತ್ತು
ಬಿಜೆಪಿಯ ಮಿತ್ರಪಕ್ಷಗಳಾದ ಟಿಡಿಪಿ ಮತ್ತು ಜನಸೇನಾ ಪಾರ್ಟಿ 2014ರ ಆಂಧ್ರಪ್ರದೇಶ ಪುನರ್ ಸಂಘಟನೆ ಕಾಯ್ದೆಯಡಿ ಈಡೇರದ ಭರವಸೆಗಳನ್ನು ಎತ್ತಿ ತೋರಿಸಿದವು. ಟಿಡಿಪಿ ನಾಯಕ ಲವು ಶ್ರೀಕೃಷ್ಣ ದೇವರಾಯಲು ಅವರು ಪೋಲಾವರಂ ನೀರಾವರಿ ಯೋಜನೆ ಸೇರಿದಂತೆ ಬಾಕಿಯುಳಿದಿರುವ ಯೋಜನೆಗಳ ಕುರಿತು ಇತ್ತೀಚಿನ ಮಾಹಿತಿಗಳನ್ನು ಕೋರಿದರು ಮತ್ತು ದಕ್ಷಿಣದ ನಗರಗಳಲ್ಲಿ ವಿಪತ್ತು ನಿರ್ವಹಣೆ ಕುರಿತು ಚರ್ಚೆಗಳಿಗೆ ಕರೆ ನೀಡಿದರು.
►ಇತರ ಕಳವಳಗಳು ಮತ್ತು ಶಾಸಕಾಂಗ ಕಾರ್ಯಸೂಚಿ
ಉದ್ದೇಶಿತ ವಕ್ಫ್(ತಿದ್ದುಪಡಿ) ಮಸೂದೆಯನ್ನು ವಿರೋಧಿಸಿದ ಡಿಎಂಕೆಯ ತಿರುಚ್ಚಿ ಶಿವ ಅವರು ಅದನ್ನು ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿದರು. ಎಲ್ಜೆಪಿ ಸಂಸದ ಅರುಣ ಭಾರ್ತಿಯವರು ಬಿಹಾರದಲ್ಲಿ ನೆರೆ ಪರಿಹಾರ ಹಾಗೂ ಲ್ಯಾಟರಲ್ ಎಂಟ್ರಿ ನಿಬಂಧನೆಗಳಡಿ ಎಸ್ಸಿ ಮತ್ತು ಎಸ್ಟಿಗಳಿಗೆ ಸಾಂವಿಧಾನಿಕ ಸುರಕ್ಷತೆಗಳ ಅಗತ್ಯಗಳನ್ನು ಪ್ರಸ್ತಾವಿಸಿದರು.
ಸರಕಾರವು ಲೋಕಸಭೆಯಲ್ಲಿ ಬಾಕಿಯುಳಿದಿರುವ ವಿವಾದಾತ್ಮಕ ವಕ್ಫ್(ತಿದ್ದುಪಡಿ) ಮಸೂದೆ ಮತ್ತು ಮುಸಲ್ಮಾನ್ ವಕ್ಫ್(ರದ್ದತಿ) ಮಸೂದೆ ಸೇರಿದಂತೆ 16 ಮಸೂದೆಗಳನ್ನು ಅಧಿವೇಶನದಲ್ಲಿ ಪರಿಗಣನೆಗೆ ಪಟ್ಟಿ ಮಾಡಿದೆ. ಯಾವುದೇ ಔಪಚಾರಿಕ ಪ್ರಸ್ತಾವವನ್ನು ಮಂಡಿಸಲಾಗಿಲ್ಲವಾದರೂ ಏಕಕಾಲಿಕ ಚುನಾವಣೆಗಳ ಕುರಿತು ಚರ್ಚೆಗಳನ್ನೂ ನಿರೀಕ್ಷಿಸಲಾಗಿದೆ.
ಪ್ರತಿಪಕ್ಷಗಳು ದೇಶದ ಆರ್ಥಿಕ,ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ನಿರ್ಣಾಯಕ ವಿಷಯಗಳ ಬಗ್ಗೆ ಉತ್ತರದಾಯಿತ್ವಕ್ಕೆ ಆಗ್ರಹಿಸುವುದರೊಂದಿಗೆ ಅಧಿವೇಶನವು ಕಾವೇರಿದ ಚರ್ಚೆಗಳಿಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ.