ಬೋಗಿಯಲ್ಲಿ ಜನಸಂದಣಿಯ ಕುರಿತು ದೂರು ನೀಡಿದ ಮಹಿಳೆ: “ನಾನು ರೈಲ್ವೆ ಸಚಿವನಲ್ಲ” ಎಂದು ಉತ್ತರಿಸಿದ ಟಿಟಿ
Screengrab:X/@mshahi0024
ಓಖಾ: ಕಿಕ್ಕಿರಿದ ಜನಸಂದಣಿಯ ರೈಲುಗಳು ಇತ್ತೀಚಿನ ದಿನಗಳಲ್ಲಿ ಚರ್ಚಾಸ್ಪದವಾಗಿ ಬದಲಾಗಿವೆ. ಹವಾನಿಯಂತ್ರಿತ ಬೋಗಿಗಳಿಂದ ಹಿಡಿದು ಸಾಮಾನ್ಯ ಬೋಗಿಯವರೆಗೆ ಟಿಕೆಟ್ ರಹಿತ ಪ್ರಯಾಣಿಕರು ತುಂಬಿ ತುಳುಕುವುದು ಸರ್ವೇಸಾಮಾನ್ಯವಾಗುತ್ತಿದೆ. ಇದರಿಂದ ಭಾರತದಲ್ಲಿನ ರೈಲ್ವೆ ಸಂಚಾರದ ಪರಿಸ್ಥಿತಿಯು ಕೆಟ್ಟದರಿಂದ ಅತಿ ಕೆಟ್ಟ ಪರಿಸ್ಥಿತಿಯೆಡೆಗೆ ಧಾವಿಸುತ್ತಿರುವಂತೆ ಕಂಡು ಬರುತ್ತಿದೆ. ಈ ನಡುವೆ ಟಿಕೆಟ್ ಪರೀಕ್ಷಕರಿಗೆ ಮಹಿಳಾ ಪ್ರಯಾಣಿಕರೊಬ್ಬರು ತಮ್ಮ ಕುಂದುಕೊರತೆ ಹೇಳಿಕೊಳ್ಳುತ್ತಿರುವುದು, ಅದಕ್ಕೆ ಅವರು ನೀಡಿರುವ ಪ್ರತಿಕ್ರಿಯೆಯ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಈ ಘಟನೆಯು ಓಖಾದಿಂದ ಕೇಂದ್ರ ಕಾನ್ಪುರಕ್ಕೆ ತೆರಳುತ್ತಿದ್ದ 22969 OKHA BSBS SF EXP ರೈಲಿನಲ್ಲಿ ನಡೆದಿದೆ. ರೈಲ್ವೆ ನಿಲ್ದಾಣದಲ್ಲಿ ನಿಂತಿರುವ ಮಹಿಳೆಯೊಬ್ಬರು ಬೋಗಿಯಲ್ಲಿ ಕಿಕ್ಕಿರಿದು ನೆರೆದಿರುವ ಜನರ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಬೋಗಿಗಳಲ್ಲಿ ಈ ಪರಿ ಜನರು ಕಿಕ್ಕಿರಿದಿದ್ದರೆ ಮಹಿಳೆಯರು ಹೇಗೆ ಸುರಕ್ಷಿತ ಭಾವವನ್ನು ಅನುಭವಿಸಬೇಕು ಎಂದು ಬೋಗಿಯೊಳಗೆ ಹೋಗಲು ಸ್ಥಳಾವಕಾಶ ಇಲ್ಲದಿರುವುದನ್ನು ಪ್ರಸ್ತಾಪಿಸದೆಯೆ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಟಿಟಿ, ನಾನು ರೈಲ್ವೆ ಸಚಿವನಲ್ಲದೆ ಇರುವುದರಿಂದ ನಾನು ಹೆಚ್ಚುವರಿ ರೈಲುಗಳ ಓಡಾಟವನ್ನು ವ್ಯವಸ್ಥೆ ಮಾಡಲು ಸಾಧ್ಯನವಿಲ್ಲ ಎಂದು ಕೈಮುಗಿದು ಹೇಳುತ್ತಿರುವುದು ಆ ವಿಡಿಯೊದಲ್ಲಿ ಸೆರೆಯಾಗಿದೆ.
ಕಡಿಮೆ ಜನಸಂದಣಿ ಇರುವ ಬೋಗಿಗೆ ತನ್ನ ಆಸನವನ್ನು ಬದಲಿಸಿಕೊಳ್ಳುವ ಇರಾದೆಯಲ್ಲಿದ್ದ ಆ ಮಹಿಳೆಯು ಬೇರೆ ವಿಧಿಯಿಲ್ಲದೆ, “ನೀವು ಕೇವಲ ನಿಮ್ಮ ಸುರಕ್ಷತೆಯ ಬಗ್ಗೆ ಕಾಳಜಿ ಹೊಂದಿದ್ದೀರಿಯೇ ಹೊರತು ಮಹಿಳೆಯರ ಭದ್ರತೆ ಅಥವಾ ಇತರ ಪ್ರಯಾಣಿಕರ ಕುರಿತಲ್ಲ” ಎಂದು ವಾಗ್ದಾಳಿ ನಡೆಸಿರುವುದು ಆ ವಿಡಿಯೊದಲ್ಲಿ ಕಾಣಬಹುದಾಗಿದೆ.
TC : "SORRY I am not a minister"
— Manu (@mshahi0024) April 12, 2024
- 22969 train filled with passengers like animals, no way even to urinate, passengers are left stranded at the stations."
Helpless Girl: Sir please make me sit in the train,the coach is full, how will a girl go among the boys?#railways pic.twitter.com/h3FqkD4dw6