ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗೆ ಸಾರ್ವಜನಿಕರೆದುರು ಚಪ್ಪಲಿಯಲ್ಲಿ ಹೊಡೆದ ಚಾಲಕಿ: ವಿಡಿಯೋ ವೈರಲ್
ಫೋಟೊ : twitter
ಘಾಜಿಯಾಬಾದ್: ಉತ್ತರಪ್ರದೇಶದ ಘಾಜಿಯಾಬಾದ್ ನ ಇಂದಿರಾಪುರಂ ಪ್ರದೇಶದಲ್ಲಿ ಇ-ರಿಕ್ಷಾ ಚಾಲಕಿಯೊಬ್ಬರು ಟ್ರಾಫಿಕ್ ಪೊಲೀಸ್ ಎಎಸ್ಐಗೆ ಸಾರ್ವಜನಿಕವಾಗಿ ಚಪ್ಪಲಿಯಿಂದ ಥಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮಂಗಳವಾರ ಹಾಡಹಗಲೇ ಈ ಘಟನೆ ನಡೆದಿದ್ದು, ಸಾರ್ವಜನಿಕರೆದುರಲ್ಲೇ ಚಾಲಕಿ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಈ ಘಟನೆಯನ್ನು ಚಿತ್ರೀಕರಿಸಿದ್ದಾರೆ.
ಮಹಿಳೆ ತನ್ನ ಮೇಲೆ ಹೊಡೆಯುತ್ತಿರುವಾಗ ಆತ್ಮರಕ್ಷಣೆಗಾಗಿ ಪೊಲೀಸ್ ಅಧಿಕಾರಿಯೂ ತಿರುಗೇಟು ನೀಡಲು ಕೈ ಬೀಸಿದರಾದರೂ ಏಟು ಮಹಿಳೆಗೆ ಬಿದ್ದಿಲ್ಲ. ಅದಾಗ್ಯೂ, ಮಹಿಳೆ ಥಳಿತವನ್ನು ಮುಂದುವರೆಸಿದ್ದಾರೆ.
ಕರ್ತವ್ಯ ನಿರತ ಅಧಿಕಾರಿ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ, ಘಟನೆಯ ಬಗ್ಗೆ ತನಿಖೆಗಾಗಿ ಪ್ರಕರಣ ದಾಖಲಿಸಿದೆ.
"ಈ ಪ್ರದೇಶದಲ್ಲಿ ಇ-ರಿಕ್ಷಾಗಳಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿರುವ ಕುರಿತು ನಮಗೆ ಹಲವಾರು ದೂರುಗಳು ಬಂದಿದ್ದವು. ಹೀಗಾಗಿ ಟ್ರಾಫಿಕ್ ಪೋಲೀಸ್ ಸ್ಥಳಕ್ಕೆ ತಲುಪಿ ಆಕೆಯ ಇ-ರಿಕ್ಷಾವನ್ನು ರಸ್ತೆಯಿಂದ ತೆರವುಗೊಳಿಸುವಂತೆ ಸೂಚಿಸಿದ್ದಾರೆ. ಈ ವೇಳೆ ಆರೋಪಿ ಮಹಿಳೆ ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಹಲ್ಲೆ ನಡೆಸಿದ್ದಾಳೆ. ಈ ಹಿಂದೆಯೂ ಆಕೆ ಹಲವು ಬಾರಿ ಇಂತಹ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಳು. ಇ-ರಿಕ್ಷಾದಲ್ಲಿ ನಂಬರ್ ಪ್ಲೇಟ್ ಇಲ್ಲದ ಕಾರಣಕ್ಕೆ ಆಕೆಯ ವಿರುದ್ಧ ಸಂಚಾರ ವಿಭಾಗದಿಂದಲೂ ದೂರು ದಾಖಲಾಗಿದ್ದು, ಕ್ರಮ ಕೈಗೊಳ್ಳಲಾಗುವುದು” ಎಂದು ಟ್ರಾಫಿಕ್ ಪೊಲೀಸ್ ಎಸಿಪಿ ಪೂನಂ ಮಿಶ್ರಾ ತಿಳಿಸಿದ್ದಾರೆ.
उत्तर प्रदेश गाजियाबाद के NH9 कनवानी पुस्ता रोड पर ट्रैफिक पुलिस कर्मी दरोगा से ई रिक्शा चालक महिला भिड़ी आपस में जोरदार मारपीट की गई जिसमें हाथ चप्पल जूते सब चले pic.twitter.com/17CouYyVTN
— Mαɳιʂԋ Kυɱαɾ αԃʋσƈαƚҽ (@Manishkumarttp) October 11, 2023