ಮಾನಸಿಕ ಅಸ್ವಸ್ಥಳಿಗೆ ಮರಣದ ನಂತರ ನ್ಯಾಯ!; ಅತ್ಯಾಚಾರ ಆರೋಪಿಗೆ 10 ವರ್ಷಗಳ ಶಿಕ್ಷೆ ವಿಧಿಸಿದ ನ್ಯಾಯಾಲಯ

ಸಾಂದರ್ಭಿಕ ಚಿತ್ರ | PC : ANI
ಥಾಣೆ: 2021ರಲ್ಲಿ ಮೃತಪಟ್ಟಿದ್ದ 65 ವರ್ಷದ ಮಾನಸಿಕ ಅಸ್ವಸ್ಥತೆಯೊಬ್ಬಳ ಮೇಲೆ ಅತ್ಯಾಚಾರವೆಸಗಿದ್ದ ಆರೋಪ ಎದುರಿಸುತ್ತಿದ್ದ ಭದ್ರತಾ ಸಿಬ್ಬಂದಿಯೊಬ್ಬನನ್ನು ಅಪರಾಧಿ ಎಂದು ಘೋಷಿಸಿರುವ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ನ್ಯಾಯಾಲಯವೊಂದು, ಆತನಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಡಿ.ಎಸ್.ದೇಶ್ ಮುಖ್ ಅವರು ಆರೋಪಿ ಮುಹಮ್ಮದ್ ಗುಡ್ಡು ಅಲಿಯಾಸ್ ದಿಲ್ಕಶ್ ಮುಹಮ್ಮದ್ ಹಬೀಬುಲ್ಲಾ ಶೇಖ್ ಗೆ 65,000 ರೂ. ದಂಡವನ್ನೂ ವಿಧಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಗಳಾದ 376 (ಅತ್ಯಾಚಾರ), 354 (1) (i) (ಲೈಂಗಿಕ ಕಿರುಕುಳ) ಹಾಗೂ 452 (ಮನೆಯ ಅತಿಕ್ರಮಣ ಪ್ರವೇಶ) ಅಡಿ ನ್ಯಾಯಾಲಯವು ಆರೋಪಿ ಮುಹಮ್ಮದ್ ಗುಡ್ಡುನನ್ನು ದೋಷಿ ಎಂದು ಘೋಷಿಸಿದೆ.
ನವೆಂಬರ್ 4, 2021ರ ಮಧ್ಯಾ0ಹ್ನ ಕುಡಿಯುವ ನೀರು ಕೇಳುವ ನೆಪದಲ್ಲಿ ಒಂಟಿಯಾಗಿದ್ದ ಸಂತ್ರಸ್ತ ಮಹಿಳೆಯ ಮನೆ ಪ್ರವೇಶಿಸಿದ್ದ ಆರೋಪಿ ಮುಹಮ್ಮದ್ ಗುಡ್ಡು, ಆಕೆಯನ್ನು ನೆಲದ ಮೇಲೆ ದೂಡಿ, ಬಾಯಿ ಮುಚ್ಚಿದ್ದ ಹಾಗೂ ಆಕೆಯ ಮೇಲೆ ಅತ್ಯಾಚಾರವೆಸಗಿ, ಸ್ಥಳದಿಂದ ಪರಾರಿಯಾಗಿದ್ದ.
ಸಂತ್ರಸ್ತ ಮಹಿಳೆಯ ಸೋದರನು ಮನೆಗೆ ಮರಳಿದಾಗ, ತನ್ನ ಸೋದರಿ ನೆಲದ ಮೇಲೆ ಬಿದ್ದಿರುವುದನ್ನು ಕಂಡಿದ್ದರು. ಆದರೆ, ಆಕೆ ಏನನ್ನೂ ವಿವರಿಸುವ ಸ್ಥಿತಿಯಲ್ಲಿರಲಿಲ್ಲ. ನಂತರ, ಆತ ತನ್ನ ಸೋದರಿಯನ್ನು ವೈದ್ಯರ ಬಳಿಗೆ ಕರೆದೊಯ್ದಾಗ, ಆಕೆಯ ಮೇಲೆ ಅತ್ಯಾಚಾರ ನಡೆದಿರುವುದನ್ನು ವೈದ್ಯರು ದೃಢಪಡಿಸಿದ್ದರು. ಇದರ ಬೆನ್ನಿಗೇ, ಪ್ರಕರಣ ದಾಖಲಾಗಿತ್ತು.
ಆದರೆ, ಪ್ರಕರಣದ ವಿಚಾರಣೆ ಪ್ರಾರಂಭಗೊಳ್ಳುವುದಕ್ಕೂ ಮುನ್ನವೇ ಸಂತ್ರಸ್ತ ಮಹಿಳೆಯು ಮೃತಪಟ್ಟಿದ್ದರು.
ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಸಂತ್ರಸ್ತ ಮಹಿಳೆಯ ಸೋದರ ಸೇರಿದಂತೆ ಒಂಬತ್ತು ಸಾಕ್ಷಿಗಳ ಹೇಳಿಕೆಗಳನ್ನು ಆಲಿಸಿತ್ತು. ಅಲ್ಲದೆ, ಆರೋಪಿಯನ್ನು ಉದ್ಯೋಗಕ್ಕೆ ನೇಮಿಸಿಕೊಂಡಿದ್ದ ಭದ್ರತಾ ಸಂಸ್ಥೆಯ ಅಧಿಕಾರಿಗಳ ಹೇಳಿಕೆಯನ್ನೂ ದಾಖಲಿಸಿಕೊಂಡಿತ್ತು. ವೈದ್ಯಕೀಯ ಪುರಾವೆಗಳೂ ಆರೋಪಿಯ ವಿರುದ್ಧದ ಆರೋಪಗಳನ್ನು ಸಾಬೀತುಗೊಳಿಸಿದ್ದವು ಎಂದು ಹೆಚ್ಚುವರಿ ಸಾರ್ವಜನಿಕ ಅಭಿಯೋಜಕಿ ಸಂಧ್ಯಾ ಎಚ್. ಮಹಾತ್ರೆ ತಿಳಿಸಿದ್ದಾರೆ.
ವಿಚಾರಣೆಯ ಬಳಿಕ ತೀರ್ಪು ಪ್ರಕಟಿಸಿದ ನ್ಯಾಯಾಧೀಶ ಡಿ.ಎಸ್.ದೇಶ್ ಮುಖ್, ದೋಷಿಗೆ ವಿಧಿಸಲಾಗಿರುವ ದಂಡದ ಮೊತ್ತವನ್ನು ಸಂತ್ರಸ್ತ ಮಹಿಳೆಯ ಸೋದರನಿಗೆ ಪರಿಹಾರವಾಗಿ ನೀಡಬೇಕು ಎಂದು ಆದೇಶಿಸಿದರು.