ನಾನು ಈ ಮಕ್ಕಳ ತಂದೆ ಅಲ್ಲ ಎಂದ ಪತಿ; ನವಜಾತ ಅವಳಿ ಶಿಶುಗಳ ಕತ್ತು ಸೀಳಿದ ಪತ್ನಿ!
ಮೃತದೇಹಗಳನ್ನು ಶವಪರೀಕ್ಷೆಗಾಗಿ ಸಾಗಿಸುತ್ತಿರುವ ಪೊಲೀಸರು PC: NDtv
ಹೊಸದಿಲ್ಲಿ: ನವಜಾತ ಅವಳಿ ಶಿಶುಗಳ ತಂದೆ ನಾನಲ್ಲ ಎಂದು ಪತಿ ಹೇಳಿದ ಹಿನ್ನೆಲೆಯಲ್ಲಿ ಹೆತ್ತ ತಾಯಿಯೇ ನವಜಾತ ಶಿಶುಗಳ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಿಂದ ವರದಿಯಾಗಿದೆ.
ಸೌದಿ ಅರೇಬಿಯಾದಲ್ಲಿ ಸುಧೀರ್ಘ ಕಾಲದಿಂದ ಕೆಲಸ ಮಾಡುತ್ತಿದ್ದ ವ್ಯಕ್ತಿ ಮೂರು ತಿಂಗಳ ಹಿಂದೆ ಸ್ವದೇಶಕ್ಕೆ ಮರಳಿದರು. ಇದಾದ ಸ್ವಲ್ಪ ಸಮಯದಲ್ಲಿ ಆತನ ಪತ್ನಿ ಅವಳಿ ಶಿಶುಗಳಿಗೆ ಜನ್ಮ ನೀಡಿದಳು. ತಕ್ಷಣ ಪೊಲೀಸ್ ಠಾಣೆಗೆ ತೆರಳಿದ ವ್ಯಕ್ತಿ, ಈ ಮಕ್ಕಳು ಅಕ್ರಮ ಸಂಬಂಧದಿಂದ ಹುಟ್ಟಿವೆ ಎಂದು ದೂರು ನೀಡಿದ.
ಇದರಿಂದ ಭೀತಿಗೊಂಡ ಮಹಿಳೆ, ಪಕ್ಕದ ಹೊಲಕ್ಕೆ ಮಕ್ಕಳನ್ನು ಎತ್ತಿಕೊಂಡು ಹೋಗಿ ಕತ್ತು ಸೀಳಿ ಹತ್ಯೆ ಮಾಡಿದಳು ಎಂದು ಪೊಲೀಸರು ಹೇಳಿದ್ದಾರೆ.
ಈ ವ್ಯಕ್ತಿಯೇ ಭಯಾನಕ ಹತ್ಯೆ ಮಾಡಿರಬೇಕು ಎಂದು ಸ್ಥಳೀಯರು ಮೊದಲು ಶಂಕಿಸಿದ್ದರು. ಆದರೆ ಪೊಲೀಸರು ಪತ್ನಿಯನ್ನು ಪ್ರಶ್ನಿಸಿದಾಗ ಆಕೆ ತಪ್ಪೊಪ್ಪಿಕೊಂಡಳು. ಮಹಿಳೆ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.
"ಅವಳಿ ಹೆಣ್ಣುಮಕ್ಕಳನ್ನು ಕೊಂದವಳು ತಾಯಿ. ಈ ಅಪರಾಧದ ಬಗ್ಗೆ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ" ಎಂದು ಪೂಂಚ್ ಎಸ್ಎಸ್ ಪಿ ಯೊಗುಲ್ ಮನ್ಹಾಸ್ ಹೇಳಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಭೀತಿ ಮೂಡಿಸಿದ್ದು, ತಾಯಿಯ ಮೇಲೆ ಕಠಿಣ ಕ್ರಮ ಕೈಗೊಳ್ಲುವಂತೆ ಆಗ್ರಹಿಸಿದ್ದಾರೆ. ಹೆಣ್ಣುಮಕ್ಕಳು ಇಷ್ಟವಿಲ್ಲ ಎಂಬ ಕಾರಣಕ್ಕೆ ದೆಹಲಿಯಲ್ಲಿ ವ್ಯಕ್ತಿಯೊಬ್ಬ ನವಜಾತ ಅವಳಿ ಹೆಣ್ಣುಮಕ್ಕಳನ್ನು ಹತ್ಯೆ ಮಾಡಿದ ಬೆನ್ನಲ್ಲೇ ಈ ಘಟನೆ ವರದಿಯಾಗಿದೆ.