ನಾಪತ್ತೆಯಾದ ಬಳಿಕ ಮತಾಂತರಗೊಂಡು ಮಹಾರಾಷ್ಟ್ರ ನಿವಾಸಿಯನ್ನು ವಿವಾಹವಾದ ಮಹಿಳೆ: ಪ್ರಕರಣ ದಾಖಲಿಸಿ ಜಮ್ಮುಕಾಶ್ಮೀರ ಪೊಲೀಸರು
ಸಾಂದರ್ಭಿಕ ಚಿತ್ರ
ಶ್ರೀನಗರ: ನಾಪತ್ತೆಯಾದ ಬಳಿಕ ಹಿಂದೂಧರ್ಮಕ್ಕೆ ಮತಾಂತರಗೊಂಡು, ಸ್ಥಳೀಯನಲ್ಲದ ವ್ಯಕ್ತಿಯನ್ನು ವಿವಾಹವಾದ ಜಮ್ಮುಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಮಹಿಳೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ತನ್ನ ಪುತ್ರಿಯು ಆಗಸ್ಟ್ 16ರ ಬೆಳಗ್ಗಿನಿಂದ ನಾಪತ್ತೆಯಾಗಿದ್ದಾರೆಂದು ಸ್ಥಳೀಯ ವ್ಯಕ್ತಿಯೊಬ್ಬರು ಬಾರಾಮುಲ್ಲಾ ಜಿಲ್ಲೆಯ ಕ್ರೀರಿ ಪೊಲೀಸ್ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಆ ಮಹಿಳೆಯು ಮತಾಂತರಗೊಂಡು, ನವಿ ಮುಂಬೈನ ಸಾಗರ್ ಪ್ರದೀಪ್ ಸಿಂಗ್ ಎಂಬಾತನನ್ನು ವಿವಾಹವಾಗಿರುವುದಾಗಿ ಶುಕ್ರವಾರ ತಿಳಿದುಬಂದಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾಗರ್ ಪ್ರದೀಪ್ ಸಿಂಗ್ನ ವಿರುದ್ಧ ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ಗಳಡಿ ಅಪಹರಣದ ಪ್ರಕರಣವನ್ನು ದಾಖಲಿಸಲಾಗಿದೆಯೆಂದು ಅವರು ಹೇಳಿದ್ದಾರೆ.
ಆದಾಗ್ಯೂ ಹಲವಾರು ಕಿಡಿಗೇಡಿಗಳು ಹಾಗೂ ಸಮಾಜವಿರೋಧಿ ಶಕ್ತಿಗಳು ಸಮಾಜದಲ್ಲಿ ಶಾಂತಿ ಕದಡುವ ಉದ್ದೇಶದಿಂದ ಈ ಘಟನೆಯನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿರುವುದಾಗಿ ಪೊಲೀಸರ ಸೈಬರ್ ಕಣ್ಗಾವಲು ಘಟಕವು ತಿಳಿಸಿದೆ.
ಈ ಘಟನೆಗೆ ಸಂಬಂಧಿಸಿ ದಾರಿತಪ್ಪಿಸುವ ಹಾಗೂ ಪ್ರಚೋದನಕಾರಿ ವಿಷಯಗಳನ್ನೊಳಗೊಂಡ ಪೋಸ್ಟ್ಗಳನ್ನು ಶೇರ್ ಮಾಡುವ ವಿರುದ್ಧ ಕಠಿಣ ಕಾನೂನುಕ್ರಮವನ್ನು ಕೈಗೊಳ್ಳಲಾಗುವುದೆಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.