ಚೆನ್ನೈ: ಮೊಬೈಲ್ ದರೋಡೆಕೋರರ ವಿರುದ್ಧ ಹೋರಾಡುವಾಗ ರೈಲಿನಿಂದ ಬಿದ್ದು ಯುವತಿ ಸಾವು
ಮೃತ ಯುವತಿ ಪ್ರೀತಿ (Photo : thenewsminute.com)
ಚೆನ್ನೈ: ಜನನಿಬಿಡ ರೈಲೊಂದರಲ್ಲಿ ಮೊಬೈಲ್ ದರೋಡೆಕೋರರ ವಿರುದ್ಧ ಹೋರಾಡುವಾಗ ಯುವತಿಯೊಬ್ಬಳು ರೈಲಿನಿಂದ ಹೊರಗೆ ಬಿದ್ದು ಮೃತಪಟ್ಟಿದ್ದಾರೆ.
ಜುಲೈ 2 ರಂದು ಇಂದಿರಾ ನಗರ ರೈಲು ನಿಲ್ದಾಣದಲ್ಲಿ MRTS (ಮಾಸ್ ರಾಪಿಡ್ ಟ್ರಾನ್ಸ್ಪೋರ್ಟ್ ಸಿಸ್ಟಮ್) ರೈಲಿನಿಂದ ಬಿದ್ದ 22 ವರ್ಷದ ಯುವತಿ ಪ್ರೀತಿ ಶನಿವಾರ ಚೆನ್ನೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕಂದಂಚವಾಡಿ ನಿವಾಸಿ ಪ್ರೀತಿ ಕೊಟ್ಟೂರುಪುರದ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಜುಲೈ 2 ರ ಸಂಜೆ, ಆಕೆ ಕೊಟ್ಟೂರ್ ಪುರಂನಿಂದ MRTS ರೈಲು ಹತ್ತಿದ್ದರು. ರೈಲಿನೊಳಗೆ ಭಾರೀ ಜನಸಂದಣಿ ಇದ್ದುದರಿಂದ ಯುವತಿ ಬಾಗಿಲಿನ ಹತ್ತಿರ ನಿಂತಿದ್ದರು. ಈ ವೇಳೆ ಇಬ್ಬರು ಯುವತಿಯ ಫೋನ್ ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ, ಈ ವೇಳೆ ನಡೆದ ಗಲಾಟೆಯಲ್ಲಿ ಇಂದಿರಾನಗರ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ಗೆ ಯುವತಿ ಬಿದ್ದಿದ್ದಾರೆ. ಇದರಿಂದ ತಲೆಗೆ ತೀವ್ರ ಗಾಯವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ರೀತಿ ಪ್ಲಾಟ್ಫಾರ್ಮ್ನಲ್ಲಿ ಬಿದ್ದಿದ್ದರೂ, ಯಾರೂ ಆಕೆಯ ಸಹಾಯಕ್ಕೆ ಧಾವಿಸಿರಲಿಲ್ಲ, ಆಂಬ್ಯುಲೆನ್ಸ್ಗೆ ಕೂಡಾ ಕರೆ ಮಾಡಿರಲಿಲ್ಲ ಎಂದು ಪ್ರೀತಿ ಅವರ ಸಹೋದರ ಗುಬೇಂದ್ರನ್ ಹೇಳಿದ್ದಾರೆ.
ಪ್ರಯಾಣಿಕರೊಬ್ಬರು ಆಕೆಯ ಗುರುತಿನ ಚೀಟಿಯಿಂದ ತುರ್ತು ದೂರವಾಣಿ ಸಂಖ್ಯೆಗೆ ಕರೆ ಮಾಡಿ ಅಪಘಾತದ ಬಗ್ಗೆ ಆಕೆಯ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಆಕೆಯ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿ ಪ್ರೀತಿಯನ್ನು ರಾಯಪೆಟ್ಟಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ಅಂತರ ಅಲ್ಲಿಂದ ಆಕೆಯನ್ನು ಸಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ತಲೆಯ ಬಲಭಾಗದಲ್ಲಿ ತೀವ್ರವಾದ ಗಾಯಗಳಾಗಿದ್ದರಿಂದ ಆಕೆಗೆ ಹಲವಾರು ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದಾರೆ, ಅದಾಗ್ಯೂ ಚಿಕಿತ್ಸೆ ಫಲಕಾರಿಯಾಗದೆ ಪ್ರೀತಿ ಮೃತಪಟ್ಟಿದ್ದಾರೆ.
ಫೋನ್ ದೋಚಿದವರು ಆಕೆಯ ಫೋನ್ ಅನ್ನು ECR ನಲ್ಲಿರುವ ಅಂಗಡಿಯೊಂದಕ್ಕೆ 2,000 ರೂ.ಗೆ ಮಾರಾಟ ಮಾಡಿದ್ದಾರೆ. ಕಳೆದ ಐದು ದಿನಗಳಿಂದ ಸ್ವಿಚ್ ಆಫ್ ಆಗಿದ್ದ ಫೋನ್, ಜುಲೈ 7 ರಂದು ಸಕ್ರಿಯವಾಗಿದೆ. ಸೆಲ್ಫೋನ್ ಸಿಗ್ನಲ್ ಮತ್ತು ಸಿಸಿಟಿವಿ ದೃಶ್ಯಗಳನ್ನು ಪತ್ತೆಹಚ್ಚಿದ ಪೊಲೀಸರು ಫೋರ್ಶೋರ್ ಎಸ್ಟೇಟ್ ನಿವಾಸಿ ವಿಘ್ನೇಶ್ (27) ಮತ್ತು ಅಡ್ಯಾರ್ನ ಮಣಿಮಾರನ್ ಎಂಬವರನ್ನು ಬಂಧಿಸಿದ್ದಾರೆ.
ಪ್ರೀತಿ ಸಾವನ್ನಪ್ಪಿದ್ದಾಳೆ ಎಂದು ಘೋಷಿಸುವವರೆಗೂ ರೈಲ್ವೆ ಪೊಲೀಸರು ಕ್ರಮ ಕೈಗೊಳ್ಳಲು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪ್ರೀತಿಯ ಸೋದರಸಂಬಂಧಿ ಅಕ್ಷಯ್ ಆರೋಪಿಸಿದ್ದಾರೆ.
“ನಾವು ದೂರು ನೀಡಿದ್ದೇವೆ, ಆದರೆ ಅವರು ಅಪರಾಧಿಗಳನ್ನು ಹುಡುಕುವಲ್ಲಿ ಆಸಕ್ತಿ ತೋರಿಸಲಿಲ್ಲ. ಅಪಘಾತದ ಸಮಯದಲ್ಲಿ ಆಕೆಯನ್ನು ರಕ್ಷಿಸಲು ರೈಲ್ವೆ ನಿಲ್ದಾಣದಲ್ಲಿ ಸಿಬ್ಬಂದಿ ಇರಲಿಲ್ಲ. ಮುಂದಿನ ರೈಲು ನಿಲ್ದಾಣದಲ್ಲಿ ನಿಂತಾಗ, ಒಬ್ಬ ಪ್ರಯಾಣಿಕ ಗುರುತಿನ ಚೀಟಿ ಎತ್ತಿ ನಮಗೆ ಮತ್ತು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು” ಎಂದು ಅವರು ಹೇಳಿದ್ದಾರೆ.