ಮ್ಯಾನ್ಮಾರ್: ನಿರಾಶ್ರಿತರ ಶಿಬಿರದ ಮೇಲೆ ಫಿರಂಗಿ ದಾಳಿ; 30 ಮಂದಿ ಮೃತ್ಯು
Photo: timesofindia.indiatimes.com
ಯಾಂಗಾನ್: ಚೀನಾದೊಂದಿಗಿನ ಮ್ಯಾನ್ಮಾರ್ ಗಡಿಯ ಸಮೀಪದ ಕಚಿನ್ ರಾಜ್ಯದಲ್ಲಿ ನಿರಾಶ್ರಿತರ ಶಿಬಿರದ ಮೇಲೆ ನಡೆದ ಫಿರಂಗಿ ದಾಳಿಯಲ್ಲಿ ಮಹಿಳೆಯರು, ಮಕ್ಕಳ ಸಹಿತ ಕನಿಷ್ಟ 30 ಮಂದಿ ಮೃತಪಟ್ಟಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.
2021ರಲ್ಲಿ ಸೇನೆಯು ಕ್ಷಿಪ್ರದಂಗೆಯ ಮೂಲಕ ಆಡಳಿತವನ್ನು ಕೈವಶ ಮಾಡಿಕೊಂಡ ಬಳಿಕ ಮ್ಯಾನ್ಮಾರ್ ಹಲವೆಡೆ ಕ್ರೂರ ಆಂತರಿಕ ಸಂಘರ್ಷದ ಉರಿಯಲ್ಲಿ ಸಿಲುಕಿದೆ. ಭದ್ರತಾ ಪಡೆಗಳ ತೀವ್ರ ಕಾರ್ಯಾಚರಣೆಯ ಬಳಿಕ ಸೇನಾಡಳಿತಕ್ಕೆ ಸೆಡ್ಡು ಹೊಡೆದಿರುವ ಜನಾಂಗೀಯ ಅಲ್ಪಸಂಖ್ಯಾತ ಗುಂಪುಗಳು ಪ್ರತಿರೋಧ ಅಭಿಯಾನ ಮುಂದುವರಿಸಿದೆ. ಕಚಿನ್ ರಾಜ್ಯದಲ್ಲಿ ಪರ್ಯಾಯ ಸರಕಾರ ರಚಿಸಿರುವ `ನ್ಯಾಷನಲ್ ಯುನಿಟಿ ಗವರ್ನ್ಮೆಂಟ್(ಎನ್ಯುಜಿ) ನಿರಾಶ್ರಿತರ ಶಿಬಿರದ ಮೇಲಿನ ದಾಳಿ ನಡೆಸಿದೆ ಎಂದು ಸೇನಾಡಳಿತ ಆರೋಪಿಸಿದೆ.
ನಿರಾಶ್ರಿತರ ಶಿಬಿರದ ಮೇಲಿನ ದಾಳಿಗೆ ನಾವು ಹೊಣೆಯಲ್ಲ. ಫಿರಂಗಿ ದಾಳಿ ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು. ನಾವು ಯಾವತ್ತೂ ಗಡಿಯಲ್ಲಿ ಶಾಂತಿ ನೆಲೆಸಲು ಕಾರ್ಯನಿರ್ವಹಿಸುತ್ತೇವೆ. ಜನಾಂಗೀಯ ಬಂಡಾಯ ಗುಂಪಿನ ಶಸ್ತ್ರಾಸ್ತ್ರ ಸಂಗ್ರಹಾಲಯದಲ್ಲಿ ಸ್ಫೋಟ ಸಂಭವಿಸಿರಬಹುದು ' ಎಂದು ಮ್ಯಾನ್ಮಾರ್ ಸೇನಾಡಳಿತದ ವಕ್ತಾರ ಝಾವ್ ಮಿನ್ಟುನ್ ಹೇಳಿದ್ದಾರೆ. ಕಚಿನ್ ರಾಜ್ಯದ ಲೈಝಾ ನಗರದಲ್ಲಿರುವ `ಕಚಿನ್ ಇಂಡಿಪೆಂಡೆನ್ಸ್ ಆರ್ಮಿ'ಯ ನೆಲೆಗಿಂತ 5 ಕಿ.ಮೀ ದೂರದಲ್ಲಿರುವ ನಿರಾಶ್ರಿತರ ಶಿಬಿರ(ಆಂತರಿಕವಾಗಿ ಸ್ಥಳಾಂತರಗೊಂಡವರ)ದ ಮೇಲೆ ಫಿರಂಗಿ ದಾಳಿ ನಡೆದಿದೆ ಎಂದು ವರದಿಯಾಗಿದೆ.