ಐಟಿಆರ್ ಸಲ್ಲಿಸುವ ಮಹಿಳೆಯರು: ಮುಂಚೂಣಿಯಲ್ಲಿ ಮಹಾರಾಷ್ಟ್ರ, ಕರ್ನಾಟಕ ಎಲ್ಲಿದೆ?
ಸಾಂದರ್ಭಿಕ ಚಿತ್ರ istockphoto.com
ಬೆಂಗಳೂರು: ಮಹಿಳಾ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆಯಲ್ಲಿ ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಲ್ಲಿ ನಿರಂತರ ಏರಿಕೆ ಕಂಡುಬಂದಿದೆ. 2019-20ರಲ್ಲಿ ರಾಜ್ಯದಲ್ಲಿ 11.30 ಲಕ್ಷ ಮಹಿಳಾ ಐಟಿಆರ್ ಸಲ್ಲಿಕೆದಾರರಿದ್ದರೆ, 2023-24ರಲ್ಲಿ ಇದು 14.3 ಲಕ್ಷಕ್ಕೆ ಹೆಚ್ಚಿದೆ. ಅಂದರೆ ಸುಮಾರು ಶೇಕಡ 26ರಷ್ಟು ಪ್ರಗತಿ ದಾಖಲಿಸಿದೆ.
ರಾಷ್ಟ್ರಮಟ್ಟದಲ್ಲಿ ಮಹಾರಾಷ್ಟ್ರದಲ್ಲಿ 36.8 ಲಕ್ಷ ಮಹಿಳೆಯರು ಕಳೆದ ಹಣಕಾಸು ವರ್ಷದಲ್ಲಿ ಐಟಿಆರ್ ಸಲ್ಲಿಸಿದ್ದು, ಕಳೆದ ಐದು ವರ್ಷಗಳಲ್ಲಿ ಶೇಕಡ 23ರಷ್ಟು ಪ್ರಗತಿ ಸಾಧಿಸಿದೆ. ಗುಜರಾತ್ ನಲ್ಲಿ 22.5 ಲಕ್ಷ ಮಹಿಳೆಯರು ಐಟಿಆರ್ ಸಲ್ಲಿಸಿ, ಶೇಕಡ 24ರಷ್ಟು ಪ್ರಗತಿ ದಾಖಲಾಗಿದೆ. ಉತ್ತರ ಪ್ರದೇಶದಲ್ಲಿ ಐಟಿಆರ್ ಸಲ್ಲಿಸುವ ಮಹಿಳೆಯರ ಸಂಖ್ಯೆ ಶೇಕಡ 29ರಷ್ಟು ಪ್ರಗತಿ ಕಂಡು 20.4 ಲಕ್ಷಕ್ಕೇರಿದೆ.
2020-21ರಲ್ಲಿ 11 ಲಕ್ಷಕ್ಕೆ ಕುಸಿದಿರುವುದನ್ನು ಹೊರತುಪಡಿಸಿದರೆ ಉಳಿದೆಲ್ಲ ವರ್ಷಗಳಲ್ಲಿ ಐಟಿಆರ್ ಸಲ್ಲಿಸುವ ಮಹಿಳೆಯರ ಸಂಖ್ಯೆ ಕರ್ನಾಟಕದಲ್ಲಿ ಹೆಚ್ಚಳ ಕಂಡಿದೆ. 2021-22ರಲ್ಲಿ ಇದು 11.7 ಲಕ್ಷಕ್ಕೆರಿದೆ. ಬಳಿಕ ಎಲ್ಲ ವರ್ಷಗಳಲ್ಲಿ ಪ್ರಗತಿ ದಾಖಲಾಗಿದೆ ಎಂದು ಹಣಕಾಸು ಸಚಿವಾಲಯ ಬಹಿರಂಗಪಡಿಸಿದ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಸುಧಾರಿತ ಆರ್ಥಿಕ ಅವಕಾಶಗಳು, ಶ್ರಮ ಶಕ್ತಿಯಲ್ಲಿ ಹೆಚ್ಚಿದ ಮಹಿಳೆಯರ ಸಂಖ್ಯೆ, ಮಹಿಳೆಯರು ಆರ್ಥಿಕ ಸ್ವಾತಂತ್ರ್ಯ ಹೊಂದಲು ಅನುಕೂಲಕರವಾದ ಪ್ರಗತಿಪರ ಸಾಮಾಜಿಕ ವಾತಾವರಣ ಇದಕ್ಕೆ ಪ್ರಮುಖ ಕಾರಣ. ರಾಜ್ಯದಲ್ಲಿ ಒಟ್ಟಾರೆ ಐಟಿಆರ್ ಸಲ್ಲಿಸುವವರ ಸಂಖ್ಯೆ ಕಳೆದ 2019-20ರಲ್ಲಿ ಇದ್ದ 38.2 ಲಕ್ಷಕ್ಕೆ ಹೋಲಿಸಿದರೆ 2022-23ರಲ್ಲಿ ಇದು 42.6 ಲಕ್ಷಕ್ಕೇರಿದೆ. 2023-24ರಲ್ಲಿ ಇದು 43 ಲಕ್ಷಕ್ಕೇರುವ ನಿರೀಕ್ಷೆ ಇದೆ.