ಮಹಿಳೆಯರ ವಿವಾಹದ ವಯಸ್ಸು 18ರಿಂದ 21ಕ್ಕೆ ಏರಿಕೆ; ಮಸೂದೆ ಅಂಗೀಕರಿಸಿದ ಹಿಮಾಚಲಪ್ರದೇಶ ವಿಧಾನಸಭೆ
ಸಾಂದರ್ಭಿಕ ಚಿತ್ರ
ಶಿಮ್ಲಾ: ಮಹಿಳೆಯರ ವಿವಾಹದ ಕನಿಷ್ಠ ವಯಸ್ಸನ್ನು 18ರಿಂದ 21 ವರ್ಷಕ್ಕೆ ಏರಿಸುವ ಮಸೂದೆಯನ್ನು ಹಿಮಾಚಲಪ್ರದೇಶ ವಿಧಾನಸಭೆ ಮಂಗಳವಾರ ಅಂಗೀಕರಿಸಿದೆ.
ಆರೋಗ್ಯ, ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ಧಾನಿ ರಾಮ್ ಶಾಂಡಿಲ್ ಮಂಡಿಸಿದ ಹಿಮಾಚಲಪ್ರದೇಶ ಬಾಲ್ಯ ವಿವಾಹ ನಿಷೇಧ ತಿದ್ದುಪಡಿ ಕಾಯ್ದೆ, 2024 ವಿಧಾನಸಭೆಯಲ್ಲಿ ಧ್ವನಿ ಮತದ ಮೂಲಕ ಅಂಗೀಕಾರವಾಯಿತು. ಈ ತಿದ್ದುಪಡಿ ಮಸೂದೆಯನ್ನು ಈಗ ಅಂಕಿತಕ್ಕಾಗಿ ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ ಅವರಿಗೆ ಕಳುಹಿಸಿ ಕೊಡಲಾಗುವುದು.
ಈ ಮಸೂದೆ ಬಾಲ್ಯ ವಿವಾಹ ನಿಷೇಧ ಕಾಯ್ದೆ, 2006ಕ್ಕೆ ತಿದ್ದುಪಡಿ ತರಲು ಉದ್ದೇಶಿಸಿದೆ. ಈ ಕಾಯ್ದೆಯ ಅಡಿಯಲ್ಲಿ ವಿವಾಹದ ಕನಿಷ್ಠ ವಯಸ್ಸು ಮಹಿಳೆಯರಿಗೆ 18 ಹಾಗೂ ಪುರುಷರಿಗೆ 21.
ವಿಧಾನ ಸಭೆಯಲ್ಲಿ ಮಸೂದೆ ಮಂಡಿಸಿದ ಶಾಂಡಿಲ್, ಲಿಂಗ ಸಮಾನತೆಯ ಖಾತರಿ ನೀಡಲು ಹಾಗೂ ಅವರಿಗೆ ಅವಕಾಶಗಳನ್ನು ಒದಗಿಸಲು ಮಹಿಳೆಯ ವಿವಾಹದ ಕನಿಷ್ಠ ವಯಸ್ಸನ್ನು ಏರಿಕೆ ಮಾಡುವುದು ಅಗತ್ಯವಾಗಿತ್ತು ಎಂದಿದ್ದಾರೆ.
ಸಣ್ಣ ಪ್ರಾಯದಲ್ಲಿ ವಿವಾಹವಾಗುವುದು ಬಾಲಕಿಯರ ಶಿಕ್ಷಣಕ್ಕೆ ಹಾಗೂ ಬದುಕಿನಲ್ಲಿ ಪ್ರಗತಿಯಾಗುವ ಸಾಮರ್ಥ್ಯಕ್ಕೆ ಅಡ್ಡಿಯಾಗಿದೆ. ಬಹು ಬೇಗನೆ ಗರ್ಭಿಣಿಯಾಗುವುದು ಹಾಗೂ ತಾಯ್ತನ ಅವರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತೆದ ಎಂದು ಶಾಂಡಿಲ್ ತಿಳಿಸಿದ್ದಾರೆ.
ಸಣ್ಣ ಪ್ರಾಯದಲ್ಲಿ ವಿವಾಹವಾಗುವುದರಿಂದ ಮಹಿಳೆಯ ವೃತ್ತಿ ಜೀವನದ ಪ್ರಗತಿಗೆ ಹಾಗೂ ಆಕೆಯ ದೈಹಿಕ ಬೆಳವಣಿಗೆಗೆ ಅಡ್ಡಿ ಉಂಟಾಗುತ್ತದೆ ಎಂದು ಮಸೂದೆ ಹೇಳಿದೆ.