ಗುಜರಾತ್ | ಸಾರ್ವಜನಿಕರಿಂದ ವಿರೋಧದ ಬಳಿಕ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ನಾಲ್ಕು ಸ್ಥಾವರಗಳಿಗೆ ಸಾಲ ರದ್ದುಗೊಳಿಸಿದ ವಿಶ್ವಬ್ಯಾಂಕ್

PC : scroll.in
ಹೊಸದಿಲ್ಲಿ: ಸ್ಥಳೀಯ ಸಮುದಾಯಗಳು ಮತ್ತು ಪರಿಸರ ಗುಂಪುಗಳಿಂದ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಗುಜರಾತಿನಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ನಾಲ್ಕು ಸ್ಥಾವರಗಳಿಗೆ ಸಾಲವನ್ನು ನೀಡದಿರಲು ವಿಶ್ವಬ್ಯಾಂಕ್ ನಿರ್ಧರಿಸಿದೆ ಎಂದು ನಾಗರಿಕ ಸಮಾಜ ಸಂಘಟನೆ ಅಲೈಯನ್ಸ್ ಫಾರ್ ಇನ್ಸಿನರೇಟರ್ ಫ್ರೀ ಗುಜರಾತ್ ಗುರುವಾರ ತಿಳಿಸಿದೆ.
ವಿಶ್ವಬ್ಯಾಂಕಿನ ಖಾಸಗಿ ಸಾಲದಾತ ಘಟಕವಾಗಿರುವ ಇಂಟರ್ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್(ಐಎಫ್ಸಿ) ರಾಜಕೋಟ್,ವಡೋದರಾ,ಅಹ್ಮದಾಬಾದ್ ಮತ್ತು ಜಾಮ್ನಗರಗಳಲ್ಲಿ ಇಂತಹ ಸ್ಥಾವರಗಳ ನಿರ್ಮಾಣಕ್ಕಾಗಿ ಅಬೆಲನ್ ಕ್ಲೀನ್ ಎನರ್ಜಿ ಲಿ.(ಎಸಿಇಎಲ್)ಗೆ ನೆರವಾಗಲು 40 ಮಿ.ಡಾ.ಗಳ ಸಾಲವನ್ನು ಮಂಜೂರು ಮಾಡಲು ಮುಂದಾಗಿತ್ತು ಎಂದು ಸಂಘಟನೆಯು ಹೇಳಿಕೆಯಲ್ಲಿ ತಿಳಿಸಿದೆ.
ಭಾರತೀಯ ಕಂಪನಿಯಾಗಿರುವ ಎಸಿಇಎಲ್ ತ್ಯಾಜ್ಯವನ್ನು ವಿದುತ್ತನ್ನಾಗಿ ಪರಿವರ್ತಿಸುವ ತಂತ್ರಜ್ಞಾನದಲ್ಲಿ ಪರಿಣತಿಯನ್ನು,ಇದು ವಿದ್ಯುತ್ ಉತ್ಪಾದಿಸಲು ನಗರ ಪ್ರದೇಶಗಳ ಮತ್ತು ಕೃಷಿ ತ್ಯಾಜ್ಯಗಳನ್ನು ಸುಡುವುದನ್ನು ಒಳಗೊಂಡಿದೆ. ಪ್ರಸ್ತುತ ಜಾಮ್ನಗರದಲ್ಲಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಸ್ಥಾವರವು ಮಾತ್ರ ಕಾರ್ಯ ನಿರ್ವಹಿಸುತ್ತಿದೆ.
ಈ ನಾಲ್ಕೂ ಸ್ಥಾವರಗಳು ಪ್ರತಿ ದಿನ ಒಟ್ಟು 3,750 ಟನ್ಗಳಷ್ಟು ನಗರಸಭಾ ವ್ಯಾಪ್ತಿಗಳ ವಿಂಗಡಿಸದ ಘನ ತ್ಯಾಜ್ಯವನ್ನು ಸುಡಲು ಉದ್ದೇಶಿಸಿದ್ದವು. ಆದರೆ ಎಸಿಇಎಲ್ನಲ್ಲಿ ಉದ್ದೇಶಿತ ಹೂಡಿಕೆಯ ಕುರಿತು ವಿವರಗಳನ್ನು ಐಎಫ್ಸಿಯು ಬಹಿರಂಗಗೊಳಿಸಿದಾಗ ನಾಲ್ಕು ಜಿಲ್ಲೆಗಳಲ್ಲಿ ಸ್ಥಾವರಗಳ ಸಮೀಪ ವಾಸವಾಗಿರುವ ಸಮುದಾಯಗಳು ಮತ್ತು ಪರಿಸರ ಗುಂಪುಗಳು ಆತಂಕಗೊಂಡಿದ್ದವು. ಯೋಜನೆಯಿಂದ ಪೀಡಿತ ಸಮುದಾಯಗಳು 2024,ಜೂ.26ರಂದು ಉದ್ದೇಶಿತ ಸಾಲ ನೀಡಿಕೆಯನ್ನು ಪ್ರಶ್ನಿಸಿ ವಿಶ್ವಬ್ಯಾಂಕಿನ ಕಾರ್ಯ ನಿರ್ವಾಹಕ ನಿರ್ದೇಶಕರಿಗೆ ಪತ್ರವನ್ನು ಬರೆದಿದ್ದವು. ಐಎಫ್ಸಿಯ ಪಾಲುದಾರರ ಕುಂದುಕೊರತೆ ಪ್ರತಿಕ್ರಿಯೆ ತಂಡಕ್ಕೂ ದೂರುಗಳನ್ನು ಸಲ್ಲಿಸಿದ್ದ ಅವು 2024, ಜುಲೈನಲ್ಲಿ ಈ ಸ್ಥಾವರಗಳ ಪರಿಣಾಮಗಳ ಕುರಿತು ಅಮೆರಿಕದ ಟ್ರೆಝರಿಗೂ ವರದಿಯನ್ನು ಸಲ್ಲಿಸಿದ್ದವು. ಸಮುದಾಯಗಳು ಅಂತರರಾಷ್ಟ್ರೀಯ ಅಭಿಯಾನವೊಂದನ್ನೂ ಆರಂಭಿಸಿದ್ದು, ಇದರ ಪರಿಣಾಮವಾಗಿ ವಿಶ್ವಾದ್ಯಂತದ ನಾಗರಿಕ ಸಮಾಜ ಸಂಘಟನೆಗಳು ಮತ್ತಿತರರು ಯೋಜನೆಗಳು ಸ್ಥಳಿಯ ನಿವಾಸಿಗಳ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುವುದರಿಂದ ಎಸಿಇಎಲ್ಗೆ ಸಾಲವನ್ನು ನಿರಾಕರಿಸುವಂತೆ ವಿಶ್ವಬ್ಯಾಂಕಿನ ಮೇಲೆ ಒತ್ತಡ ಹೇರಿದ್ದವು ಎಂದು ತಿಳಿಸಿರುವ ಹೇಳಿಕೆಯು, ಸ್ಥಾವರಗಳಿಗೆ ವಿರೋಧದಿಂದಾಗಿ ವಿಶ್ವಬ್ಯಾಂಕ್ ಯೋಜನೆ ಕುರಿತು ತನ್ನ ನಿರ್ಧಾರವನ್ನು ಎರಡು ಸಲ ವಿಳಂಬಿಸಿತ್ತು. ಈಗ ಅಂತಿಮವಾಗಿ ಸಾಲ ನೀಡದಿರಲು ಅದು ನಿರ್ಧರಿಸಿದೆ ಎಂದು ತಿಳಿಸಿದೆ.