ಗುಜರಾತ್ | ಅಮೆರಿಕದಲ್ಲಿದ್ದ ಮಕ್ಕಳಿಗೆ ನಾಪತ್ತೆಯಾಗಿದ್ದ ತಂದೆಯ ಸುಳಿವು ನೀಡಿದ ಐಫೋನ್!
ಕೊಲೆಯಾದ ಸ್ಥಿತಿಯಲ್ಲಿ ಪತ್ತೆ
PC : indiatoday.in
ಅಹಮದಾಬಾದ್: ನಾಪತ್ತೆಯಾಗಿದ್ದ 65 ವರ್ಷದ ವೃದ್ಧರೊಬ್ಬರ ಮಕ್ಕಳು ಅವರ ಐಫೋನ್ ಅನ್ನು ಟ್ರ್ಯಾಕ್ ಮಾಡಿದ ನಂತರ, ಅಹಮದಾಬಾದ್ ಪೊಲೀಸರು ಅವರ ಮೃತದೇಹವನ್ನು ಪತ್ತೆ ಹಚ್ಚಿರುವ ಘಟನೆ ವರದಿಯಾಗಿದೆ. ನಾಪತ್ತೆಯಾಗಿದ್ದ ವೃದ್ಧರ ಮೃತದೇಹವು ತಲೆ ಜಜ್ಜಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಅಹಮದಾಬಾದ್ ನ ಬೋಪಾಲ್ ಪ್ರದೇಶದ ನಿವಾಸಿಯಾದ ಭೂ ಮಧ್ಯವರ್ತಿ ದೀಪಕ್ ಪಟೇಲ್ ಎಂಬವರು ಇನ್ನು ಕೆಲವೇ ಗಂಟೆಗಳಲ್ಲಿ ಮನೆಗೆ ವಾಪಸ್ಸಾಗುತ್ತೇನೆ ಎಂದು ತಮ್ಮ ಪತ್ನಿಗೆ ತಿಳಿಸಿ ಮನೆ ತೊರೆದಿದ್ದರು. ಆದರೆ, ಎಷ್ಟು ಹೊತ್ತಾದರೂ ಅವರು ಮನೆಗೆ ಮರಳದಿದ್ದಾಗ ಹಾಗೂ ಫೋನ್ ಅನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ, ಅವರ ಪತ್ನಿಯು ಅಮೆರಿಕದಲ್ಲಿರುವ ತಮ್ಮ ಮಕ್ಕಳನ್ನು ಸಂಪರ್ಕಿಸಿದ್ದಾರೆ.
ಅದರಿಂದ ತಮ್ಮ ತಂದೆಯ ಸುರಕ್ಷತೆ ಬಗ್ಗೆ ಕಳವಳಗೊಂಡಿರುವ ಮಕ್ಕಳು, ಅವರಿದ್ದ ಕೊನೆಯ ಸ್ಥಳವನ್ನು ಪತ್ತೆ ಹಚ್ಚಲು ಐಫೋನ್ ನ ಟ್ರ್ಯಾಕಿಂಗ್ ವೈಶಿಷ್ಟ್ಯವನ್ನು ಬಳಸಿದ್ದಾರೆ.
ಈ ಸುಳಿವನ್ನು ಆಧರಿಸಿ, ದೀಪಕ್ ಪಟೇಲ್ ರ ಹುಡುಕಾಟಕ್ಕೆ ತೆರಳಿದ ಸಂಬಂಧಿಕರಿಗೆ ಶುಕ್ರವಾರ ಬೆಳಗ್ಗೆ ಗರೋಡಿಯ ಗ್ರಾಮದ ಬಳಿ ಅವರ ಮೃತದೇಹವು ಪತ್ತೆಯಾಗಿದೆ. ಈ ಸಂದರ್ಭದಲ್ಲಿ ಅವರ ತಲೆಗೆ ಗಂಭೀರ ಸ್ವರೂಪದ ಪೆಟ್ಟಾಗಿ, ಸುತ್ತಮುತ್ತಲ ಪ್ರದೇಶ ರಕ್ತಸಿಕ್ತವಾಗಿರುವುದು ಕಂಡು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬೋಪಾಲ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಬಿ.ಟಿ.ಗೋಹಿಲ್, ಈ ಸಂಬಂಧ ಹತ್ಯೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಶಂಕಾಸ್ಪದ ವ್ಯಕ್ತಿಗಳನ್ನು ಪ್ರಶ್ನಿಸುತ್ತಿದ್ದು, ವಿಧಿವಿಜ್ಞಾನ ತಜ್ಞರ ನೆರವು ಪಡೆದಿದ್ದಾರೆ.
ದೀಪಕ್ ಪಟೇಲ್ ರನ್ನು ಹತ್ಯೆಗೈಯ್ಯಲಾಗಿದೆ ಎಂದು ಪೊಲೀಸರು ಶಂಕಿಸಿದ್ದರೂ, ಹತ್ಯೆಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಭೂವ್ಯಾಜ್ಯ ಸೇರಿದಂತೆ ಹಲವಾರು ಸಾಧ್ಯರತೆಗಳ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.