ಲೋಕಸಭಾ ಚುನಾವಣೆಗಳು ನ್ಯಾಯಸಮ್ಮತವಾಗಿದ್ದರೆ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವುದು ಕಷ್ಟ: ಮಾಯಾವತಿ
Photo Credit: PTI
ಹದೋಯಿ(ಉತ್ತರ ಪ್ರದೇಶ): ಜನರು ಬಿಜೆಪಿಯ ಪೊಳ್ಳು ಭರವಸೆಗಳನ್ನು ಅರ್ಥ ಮಾಡಿಕೊಂಡಿದ್ದಾರೆ ಮತ್ತು ಲೋಕಸಭಾ ಚುನಾವಣೆಗಳು ಮುಕ್ತ ಹಾಗೂ ನ್ಯಾಯಸಮ್ಮತ ರೀತಿಯಲ್ಲಿ ನಡೆದರೆ ಅದಕ್ಕೆ ಕೇಂದ್ರದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವುದು ಕಷ್ಟವಾಗಲಿದೆ ಎಂದು ಬಿಎಸ್ಪಿ ಅಧ್ಯಕ್ಷೆ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿಯವರು ಪ್ರತಿಪಾದಿಸಿದ್ದಾರೆ.
ಬುಧವಾರ ಇಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ನಂತೆ ಬಿಜೆಪಿಯೂ ಎಲ್ಲ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ರಾಜಕೀಯಗೊಳಿಸಿದೆ ಎಂಬಂತೆ ಕಂಡು ಬರುತ್ತಿದೆ ಎಂದರು.
ಈ ಬಾರಿ ಬಿಜೆಪಿಯ ನಾಟಕೀಯತೆ ಮತ್ತು ವಾಗಾಡಂಬರ ಕೆಲಸ ಮಾಡುವುದಿಲ್ಲ. ಏಕೆಂದರೆ ಅದು ನೀಡಿದ್ದ ಭರವಸೆಗಳಲ್ಲಿ ಕಾಲುಭಾಗವೂ ಈಡೇರಿಲ್ಲ ಎನ್ನುವುದನ್ನು ಜನರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಜನರು ಬಿಜೆಪಿಯ ಪೊಳ್ಳು ಭರವಸೆಗಳನ್ನು ಸಾಕಷ್ಟು ನೋಡಿದ್ದಾರೆ ಎಂದು ಹೇಳಿದ ಅವರು, ವರ್ಷಗಳೇ ಕಳೆದಿದ್ದರೂ ಸರಕಾರಿ ಉದ್ಯೋಗಗಳಲ್ಲಿ ದಲಿತರು,ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಮೀಸಲಾತಿಗಳನ್ನು ಪೂರೈಸಲಾಗಿಲ್ಲ. ಖಾಸಗೀಕರಣ ನೀತಿಯಿಂದಾಗಿ ಈ ವರ್ಗಗಳಿಗೆ ಸೇರಿದ ಕೆಲವೇ ಜನರು ಮೀಸಲಾತಿಯ ಪ್ರಯೋಜನ ಪಡೆಯುತ್ತಿದ್ದಾರೆ. ಅಲ್ಲದೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಕಳೆದ ಕೆಲವು ವರ್ಷಗಳಿಂದ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಜನರಿಗೆ ಕಿರುಕುಳಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಕೇಂದ್ರದಲ್ಲಿ ಬಿಎಸ್ಪಿ ಸರಕಾರವನ್ನು ರಚಿಸಿದರೆ ಇದನ್ನು ನಿಲ್ಲಿಸಲಾಗುವುದು ಎಂದರು. ಬಿಜೆಪಿ ಸರಕಾರವು ಬ್ರಾಹ್ಮಣರಿಗೆ ಕಿರುಕುಳ ನೀಡುತ್ತಿದೆ ಎಂದೂ ಅವರು ಆರೋಪಿಸಿದರು.
ಬಿಎಸ್ಪಿ ಹೊರತುಪಡಿಸಿ ಇತರ ಎಲ್ಲ ಪ್ರತಿಪಕ್ಷಗಳು ಮತ್ತು ಬಿಜೆಪಿ ಚುನಾವಣಾ ಬಾಂಡ್ ಗಳ ಮೂಲಕ ದೊಡ್ಡ ಬಂಡವಾಳಶಾಹಿಗಳಿಂದ ಹೇರಳ ಹಣವನ್ನು ಪಡೆದುಕೊಂಡಿವೆ. ಬಿಎಸ್ಪಿ ಯಾವುದೇ ಬಂಡವಾಳಶಾಹಿಯಿಂದ ಒಂದೇ ಒಂದು ರೂಪಾಯಿಯನ್ನೂ ಪಡೆದಿಲ್ಲ ಎಂದ ಅವರು, ಹಿಂದಿನ ಆಡಳಿತಗಳಂತೆ ಬಿಜೆಪಿ ಆಡಳಿತದಲ್ಲಿಯೂ ದೇಶಾದ್ಯಂತ ಬಡತನ ಮತ್ತು ನಿರುದ್ಯೋಗ ನಿರಂತರವಾಗಿ ಹೆಚ್ಚುತ್ತಿವೆ. ಭ್ರಷ್ಟಾಚಾರ ಕೊನೆಗೊಂಡಿಲ್ಲ ಮತ್ತು ಗಡಿಗಳು ಸಂಪೂರ್ಣವಾಗಿ ಸುರಕ್ಷಿತವಾಗಿಲ್ಲ. ಇವೂ ಗಂಭೀರ ಕಳವಳದ ವಿಷಯಗಳಾಗಿವೆ ಎಂದರು.