ಬಿಜೆಪಿಗೆ ಮಹಿಳೆಯರ ಸುರಕ್ಷತೆ ಬಗ್ಗೆ ಕಾಳಜಿಯಿಲ್ಲ, ಅಧಿಕಾರ ತಂದೆಯ ಬಳಿಯೇ ಉಳಿಯಲಿದೆ: ಬ್ರಿಜ್ ಭೂಷಣ್ ಪುತ್ರನಿಗೆ ಟಿಕೆಟ್ ನೀಡಿದ್ದಕ್ಕೆ ಬಜರಂಗ್ ಪುನಿಯ ಟೀಕೆ
ಬಜರಂಗ್ ಪುನಿಯ (PTI)
ಲಕ್ನೊ: ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಹಾಲಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಬದಲಿಗೆ ಅವರ ಪುತ್ರ ಕರಣ್ ಭೂಷಣ್ ಅವರಿಗೆ ಕೈಸರ್ಗಂಜ್ ಲೋಕಸಭಾ ಕ್ಷೇತ್ರದಿಂದ ಗುರುವಾರ ಬಿಜೆಪಿ ಟಿಕೆಟ್ ಪ್ರಕಟಿಸಿದೆ.
ಮೇ 20ರಂದು ನಡೆಯಲಿರುವ ಐದನೆ ಹಂತದ ಚುನಾವಣೆಯಲ್ಲಿ ಕೈಸರ್ಗಂಜ್ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಡೆದಿದ್ದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಖ್ಯಾತ ಕುಸ್ತಿಪಟು ಬಜರಂಗ್ ಪುನಿಯ, "ಬಿಜೆಪಿ ಮಹಿಳೆಯರ ಸುರಕ್ಷತೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಹಾಗೂ ಪರಿವಾರವಾದ ಅಥವಾ ವಂಶಪಾರಂಪರ್ಯ ರಾಜಕಾರಣ ಆಡಳಿತಾರೂಢ ಬಿಜೆಪಿಯಲ್ಲೂ ಹಾಸು ಹೊಕ್ಕಾಗಿದೆ" ಎಂದು ಟೀಕಿಸಿದ್ದಾರೆ.
ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸಬೇಕು ಎಂದು ನಡೆದಿದ್ದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಜರಂಗ್ ಪುನಿಯ, "ಬೃಜ್ ಭೂಷಣ್ ಬಗ್ಗೆ ಸರಕಾರವೇಕೆ ಇಷ್ಟು ಹೆದರಿಕೊಂಡಿದೆ ಎಂದು ನನಗೆ ತಿಳಿದಿಲ್ಲ. ಅವರ ಪುತ್ರನಿಗೆ ಟಿಕೆಟ್ ದೊರೆತಿರುವುದೂ ಕೂಡಾ ಬಿಜೆಪಿಯಲ್ಲಿ ಪರಿವಾರವಾದ ಇರುವುದನ್ನು ತೋರಿಸುತ್ತಿದೆ. ಬೇರೆ ಪಕ್ಷಗಳಲ್ಲಿ ಪರಿವಾರವಾದವಿದೆ ಎಂದು ಬಿಜೆಪಿ ಟೀಕಿಸುತ್ತದೆ. ಆದರೆ, ಬಿಜೆಪಿಯೂ ಅದಕ್ಕಿಂತ ಭಿನ್ನವಾಗಿಲ್ಲ" ಎಂದು ಕಿಡಿ ಕಾರಿದ್ದಾರೆ.
ತಂದೆಯ ಟಿಕೆಟ್ ಅನ್ನು ಪುತ್ರನಿಗೆ ನೀಡುವ ಮೂಲಕ ತಾನು ಮಹಿಳೆಯರ ಧ್ವನಿಗಳನ್ನು ಗೌರವಿಸುವುದಿಲ್ಲ ಹಾಗೂ ತನಗೆ ಮಹಿಳಾ ಸುರಕ್ಷತೆಯ ಬಗ್ಗೆ ಯಾವುದೇ ಕಾಳಜಿಯಿಲ್ಲ ಎಂದು ಬಿಜೆಪಿ ನಿರೂಪಿಸಿದೆ ಎಂದೂ ಬಜರಂಗ್ ಪುನಿಯ ಟೀಕಿಸಿದ್ದಾರೆ.
ಈ ನಡುವೆ, ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಪರ ಮೊತ್ತಮೊದಲ ಬಾರಿಗೆ ಪದಕ ಜಯಿಸಿದ ಏಕೈಕ ಕುಸ್ತಿಪಟು ಸಾಕ್ಷಿ ಮಲಿಕ್ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, "ದೇಶದ ಪುತ್ರಿಯರು ಪರಾಭವಗೊಂಡರು, ಬ್ರಿಜ್ ಭೂಷಣ್ ಗೆಲುವು ಸಾಧಿಸಿದರು. ನಾವು ನಮ್ಮ ವೃತ್ತಿ ಜೀವನವನ್ನೆಲ್ಲ ಪಣಕ್ಕಿಟ್ಟೆವು. ನಾವು ಮಳೆಯಲ್ಲಿ, ಬಿಸಿಲಿನಲ್ಲಿ ರಸ್ತೆಯ ಮೇಲೆ ಮಲಗಿದೆವು. ಆದರೂ, ಬ್ರಿಜ್ ಭೂಷಣ್ರನ್ನು ಈವರೆಗೂ ಬಂಧಿಸಿಲ್ಲ. ನಾವು ನ್ಯಾಯವನ್ನಲ್ಲದೆ ಮತ್ತೇನನ್ನೂ ಕೇಳುತ್ತಿಲ್ಲ. ಬಂಧನವನ್ನು ಪಕ್ಕಕ್ಕಿಡಿ, ಆತನ ಪುತ್ರನಿಗೆ ಚುನಾವಣಾ ಟಿಕೆಟ್ ನೀಡುವ ಮೂಲಕ ದೇಶದ ಲಕ್ಷಾಂತರ ಪುತ್ರಿಯರ ಆಕಾಂಕ್ಷೆಗಳನ್ನು ಭಂಗಗೊಳಿಸಲಾಗಿದೆ. ಕೇವಲ ಒಂದೇ ಒಂದು ಕುಟುಂಬಕ್ಕೆ ನೀಡಲಾಗಿರುವ ಟಿಕೆಟ್ಗೆ ಸಂಬಂಧಿಸಿದ ವ್ಯಕ್ತಿಯೆದುರು ದೇಶದ ಸರಕಾರವು ಇಷ್ಟೊಂದು ಅಧಿಕಾರ ರಹಿತವಾಗಿದೆಯೆ? ಅವರಿಗೆ ಪ್ರಭು ಶ್ರೀರಾಮನ ಹೆಸರಲ್ಲಿ ಮತ ಯಾಚಿಸುವುದು ಮಾತ್ರ ಬೇಕಾಗಿದೆ. ಆದರೆ, ಆತ ತೋರಿದ ಮಾರ್ಗದ ಗತಿಯೇನು?" ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.